ದೇವರ ದರ್ಶನ ಮುಗಿಸಿ ಮನೆ ಸೇರಬೇಕಿದ್ದ ಕುಟುಂಬವೊಂದು ಹೆದ್ದಾರಿಯಲ್ಲೇ ದುರಂತ ಅಂತ್ಯ ಕಂಡಿದೆ. ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ವರ್ಷದ ಮಗು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಮನಕಲಕುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸಿ ವಿಕಾಸ್ ಎಂಬುವವರ ಕುಟುಂಬ ಹಾಗೂ ಅವರ ಮೈಸೂರಿನ ಸಂಬಂಧಿಕರು ಸೇರಿ ಸೆಪ್ಟೆಂಬರ್ 6 ರಂದು ತಿರುಪತಿಗೆ ತೆರಳಿದ್ದರು. ಸ್ವಾಮಿಯ ದರ್ಶನ ಮುಗಿಸಿ ಇಂದು ಮುಂಜಾನೆ 3 ಗಂಟೆಗೆ ‘ಟೊಯೊಟಾ ರೂಮಿಯಾನ್’ ಕಾರಿನಲ್ಲಿ ಒಟ್ಟು 8 ಮಂದಿ ಬೆಂಗಳೂರಿಗೆ ವಾಪಸ್ ಹೊರಟಿದ್ದರು.
ಬೆಳಗ್ಗೆ ಸುಮಾರು 6:45 ರ ವೇಳೆಗೆ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇಯ (ಹೆದ್ದಾರಿ-07 ಕಾರಿಡಾರ್) ಕೆಜಿಎಫ್ ತಾಲೂಕಿನ ದೊಡ್ಡಕಾರಿ ಗ್ರಾಮದ ಬಳಿ ಕಾರು ತಲುಪಿದಾಗ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ಪಕ್ಕದ ಹಳ್ಳಕ್ಕೆ ಬಿದ್ದಿದೆ.
ಮೃತರ ವಿವರ:
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ : ಶಾರದಾಬಾಯಿ (70), ದೇವೇಂದ್ರಕುಮಾರ್ (44), ದೀಕ್ಷಿತಾ (20), ಜಿಷ್ಣುಸಾಯಿ (12). ಕಾರಿನಲ್ಲಿದ್ದ ಕವಿತಾ, 5 ವರ್ಷದ ಬಾಲಕಿ ಅದ್ವೀಕಾ, ನೀತುರಾವ್ ಹಾಗೂ ಕಾರು ಚಾಲಕ ವಿಕಾಸ್ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಈ ದುರ್ಘಟನೆಗೆ ಕಾರಣವೆನ್ನಲಾಗಿದ್ದು, ಚಾಲಕ ವಿಕಾಸ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮೃತರ ಸಂಬಂಧಿ ರಾಕೇಶ್ ಅವರು ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್.ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೊಸ ಎಕ್ಸ್ಪ್ರೆಸ್ ಕಾರಿಡಾರ್ಗಳಲ್ಲಿ ಅತಿವೇಗದ ಚಾಲನೆ ಜೀವಕ್ಕೆ ಕಂಟಕವಾಗುತ್ತಿದ್ದು, ವಾಹನ ಸವಾರರು ವೇಗದ ಮಿತಿಯನ್ನು ಕಾಪಾಡಿಕೊಳ್ಳುವಂತೆ ಪೊಲೀಸರು ಎಚ್ಚರಿಸಿದ್ದಾರೆ.


