ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಸ್‌ಐ ಜಯಶ್ರೀ ಎಂಬ ಮಹಿಳಾ ಪೊಲೀಸ್ ಅಧಿಕಾರಿಗೆ ಸಂಬಂಧಿಸಿದ ವಿವಾದಾತ್ಮಕ (Shocking) ವಿಡಿಯೋ ಕಾಲ್ ಪ್ರಕರಣದ ಬೆನ್ನಲ್ಲೇ, ಸಾಯಿ ಕುಮಾರ್ ಅಲಿಯಾಸ್ ಸುರೇಶ್ ಅವರ ತಂದೆ ನಾಗಲಿಂಗಯ್ಯ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಮಗನಿಗೆ ಪದೇಪದೇ ಸುಳ್ಳು ಪ್ರಕರಣಗಳನ್ನು (Fake Case) ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಮಾಧ್ಯಮಗಳ ಮುಂದೆ ಕಣ್ಣೀರಿಟ್ಟು ಅಸಹಾಯಕತೆಗೆ ತೋಡಿಕೊಂಡಿದ್ದಾರೆ.
ಕುಣಿಗಲ್ ತಾಲ್ಲೂಕಿನ ಕಲ್ಲುಹಳ್ಳಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ಮಾತಾಡಿದ ನಾಗಲಿಂಗಯ್ಯ, ಮಗನ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮಗ ತಪ್ಪು ಮಾಡಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಿ, ಆದರೆ ಆತನ ಜೀವನವೇ ಜೈಲಿನಲ್ಲೇ ಕಳೆಯುವಂತಾಗಬಾರದು ಎಂದು ಮನವಿ ಮಾಡಿದ್ದಾರೆ.

ನನ್ನ ಮಗ ತಪ್ಪು ಮಾಡಿದರೆ ನಿಮ್ಮ ಮಕ್ಕಳಂತೆ ಭಾವಿಸಿ ಶಿಕ್ಷೆ ಕೊಡಿ. ಅವನ ಜೀವನದ ಜೊತೆ ಆಟವಾಡಬೇಡಿ. ತಪ್ಪೋ-ಸರಿಯೋ ಇನ್ನು ಮುಂದೆ ಅವನಿಗೆ ನಾನೇ ಬುದ್ದಿ ಕಲಿಸುತ್ತೇನೆ. ಬೇಕಾದರೆ ನಿಮ್ಮ ಕೈ-ಕಾಲು ಹಿಡಿಯುತ್ತೇನೆ. ನನ್ನ ಮಗನಿಗೆ ಬದುಕಲು ಬಿಡಿ” ಎಂದು ನಾಗಲಿಂಗಯ್ಯ ಭಾವುಕರಾಗಿ ಮನವಿ ಮಾಡಿದ್ದಾರೆ.

ಮಗನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಪೂರ್ಣ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಅವರು ಹೇಳಿದ್ದರು. ಪ್ರಕರಣಗಳ ಕಾರಣದಿಂದ ಮಗನ ಭವಿಷ್ಯ ಮಾತ್ರವಲ್ಲದೆ ಇದೇ ಕುಟುಂಬದ ನೆಮ್ಮದಿಯೂ ಹಾಳಾಗಿದೆ ಎಂದು ಆರೋಪ ತೊಡಿಕೊಂಡಿದ್ದಾರೆ.

ಈ ಬೆಳವಣಿಗೆಯಿಂದಾಗಿ ಕುಟುಂಬದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸರಿಯಾಗಿ ಊಟ-ತಿಂಡಿ ಮಾಡಲಾಗುತ್ತಿಲ್ಲ, ನಿದ್ದೆಯೂ ಬರುತ್ತಿಲ್ಲ ಎಂದು ನಾಗಲಿಂಗಯ್ಯ ಹೇಳಿದ್ದಾರೆ. ತೋಟ ಹಾಗೂ ಮನೆಯ ಕೆಲಸಗಳನ್ನು ಒಬ್ಬರೇ ನಿಭಾಯಿಸುವುದು ಕಷ್ಟವಾಗುತ್ತದೆ. ಮಗ ಮನೆಗೆ ಮರಳಿ ಬರುವುದಕ್ಕಾಗಿ ನಮ್ಮೆಲ್ಲರಿಗೂ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.