ಬೆಳಗಾವಿ : ಬೇಡವಾದ ವಿಚಾರಕ್ಕೆ ಸದಾಕಾಲ ಸುದ್ದಿಯಲ್ಲಿರುವ ಬೆಳಗಾವಿ ಹಿಂಡಲಗಾ ಜೈಲು ಈಗ ಮತ್ತೊಂದು ಹೊಸ ವಿಚಾರಕ್ಕೆ ಸದ್ದು ಮಾಡುತ್ತಿದೆ. ಇಲ್ಲಿ ನಡೆಯುವ ಕರ್ಮಕಾಂಡಗಳ ಕುರಿತು ಯುವಕನೋರ್ವ ವೀಡಿಯೋ ಮೂಲಕ ಎಳೆ, ಎಳೆಯಾಗಿ ಮಾಹಿತಿ ನೀಡಿದ್ದಾನೆ.
ಹೌದು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಅಧಿಕಾರಿಗಳೇ ಹಣಕ್ಕಾಗಿ ನಾನಾ ರೀತಿಯ ವಾಮಮಾರ್ಗದ ಮೂಲಕ ಕೈದಿಗಳ ಜೀವ ಹಿಂಡುವ ಕೆಲಸ ಮಾಡುತ್ತಿರುವುದು ಬಯಲಾಗಿದೆ. ಕಳ್ಳ ಮಾರ್ಗಗಳ ಮೂಲಕ, ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ತಂದು ಹಣಕ್ಕಾಗಿ ಮಾರಾಟ ಮಾಡುವುದು ಎಗ್ಗಿಲ್ಲದೆ ಸಾಗುತ್ತಿರುವುದನ್ನು ಯುವಕ ಬಯಲು ಮಾಡಿದ್ದಾನೆ.
ತುಮಕೂರು ಮೂಲದ ಸಾಯಿಕುಮಾರ್ ಎಂಬ ಯುವಕ ಕಳೆದ 2024 ರಲ್ಲಿ ಹಿಂಡಲಗಾ ಜೈಲಿನಲ್ಲಿ ಕೈದಿಯಾಗಿದ್ದ ಸಂದರ್ಭದಲ್ಲಿ ಇಲ್ಲಿ ನಡೆಯುತ್ತಿರುವ ಅವಾಂತರಗಳ ಕುರಿತು ಮಾಹಿತಿ ನೀಡಿದ್ದಾನೆ. ಹಿಂಡಲಗಾ ಜೈಲಿನಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ಸಾಗುತ್ತದೆ ಎಂಬ ಅಂಶವನ್ನು ಯುವಕ ವೀಡಿಯೋದಲ್ಲಿ ಹೇಳಿದ್ದಾನೆ.
ಜೈಲಿನ ಒಳಗೆ ನಡೆಯುವ ಕರ್ಮಕಾಂಡಗಳನ್ನು ಬಯಲು ಮಾಡಿದ್ದರೆ, ಹಾಗೆಯೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತದೆ. ಅಧಿಕಾರಿಗಳೇ ಇಲ್ಲಿ ಮೊಬೈಲ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಸಪ್ಲೈ ಮಾಡುತ್ತಾರೆ ಎಂದು ಆರೋಪಿಸಿದ್ದಾನೆ.
ಹಿಂಡಲಗಾ ಜೈಲಿನಲ್ಲಿ ಸಾಮ್ರಾಜ್ಯ ಸೃಷ್ಟಿಸಿದ್ದ ಪೋಲಿ ಪೋಲಿಸಮ್ಮನ : ಹಣಕ್ಕಾಗಿ ಕೈದಿಗಳ ಜೊತೆ ಬೆತ್ತಲೆ ವೀಡಿಯೋ ಕಾಲ್ ಮಾಡುವ ಮಹಿಳಾ ಪೊಲೀಸ್ ಅಧಿಕಾರಿಯೋರ್ವಳು ಕಳೆದ ಕೆಲ ತಿಂಗಳುಗಳ ಹಿಂದೆ ಬೆಳಗಾವಿ ಹಿಂಡಲಗಾ ಜೈಲಿನ ಭದ್ರತಾ ಅಧಿಕಾರಿಗಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಮಹಿಳೆ ಕೈದಿಗಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ ನಿಷೇಧಿತ ವಸ್ತುಗಳನ್ನು ಕಳ್ಳ ಮಾರ್ಗದ ಮೂಲಕ ಜೈಲಿನೊಳಗೆ ತಲುಪಿಸುವ ಕೆಲಸ ಮಾಡುತ್ತಿದ್ದಳು ಎಂಬುದು ಗುಟ್ಟಾಗಿ ಉಳಿದಿಲ್ಲ. ಸಹ ಅಧಿಕಾರಿಗಳ ಜೊತೆ ಕಿರಿಕ್ ಹೊಂದಿದ್ದ ಈ ಮಹಿಳಾ ಅಧಿಕಾರಿ ವಿರುದ್ಧ ಪ್ರಕರಣ ದಾಖಲಸಿದ್ದರು ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು ಎನ್ನಲಾಗುತ್ತಿದೆ.


