ಬೆಳಗಾವಿ : ಅಪರಾಧಿಗಳಿಗೆ ಸಿಂಹ ಸ್ವಪ್ನ, ಜನ ಸ್ನೇಹಿ ಪೊಲೀಸ್ ಆಡಳಿತಕ್ಕೆ ಒತ್ತು‌ ನೀಡಿರುವ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್. ಗಡ್ಡೇಕರ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ಗೌರವ ರಾಷ್ಟಪತಿ ಪದಕಕ್ಕೆ ಭಾಜನರಾಗಿದ್ದು ನಗರ ಪೊಲೀಸ್ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ.

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಅಪರಾಧ, ಕಾನೂನು ಸುವ್ಯವಸ್ಥೆ ಹಾಗೂ ಸೈಬರ್ ಅಪರಾಧ ನಿಯಂತ್ರಣದಲ್ಲಿ ಸಾಧನೆ ಮಾಡಿರುವ ಗಡ್ಡೆಕರ್ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಕಳೆದ 2005ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಇಲಾಖೆಗೆ ನೇಮಕಗೊಂಡ ಗಡ್ಡೇಕರ್ ಮಹಾಲಿಂಗಪುರ, ಇಳಕಳ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2016ರಲ್ಲಿ ಸಿಪಿಐ ಹುದ್ದೆಗೆ ಬಡ್ತಿ ಹೊಂದಿದ ಬಳಿಕ ಸಿಸಿಬಿ ವಿಶೇಷ ಪೊಲೀಸ್ ಠಾಣೆ, ಮಾಳಮಾರುತಿ ಪೊಲೀಸ್ ಠಾಣೆ ಹಾಗೂ ಸಿಇಎನ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಾಳಮಾರುತಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊಲೆ, ದರೋಡೆ, ಮನೆಗಳ್ಳತನ, ಸರಗಳ್ಳತನ, ಮಾದಕ ವಸ್ತು, ಸೈಬರ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಸರಣಿ ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್ ವಿರುದ್ಧ ಕಾರ್ಯಾಚರಣೆ ನಡೆಸಿ 28 ಪ್ರಕರಣಗಳನ್ನು ಭೇದಿಸಿ 1,049 ಗ್ರಾಂ ಚಿನ್ನಾಭರಣ ವಶಪಡಿಸಿ ಕೊಂಡಿರುವುದು ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.

ಗಡ್ಡೇಕರ್ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ 59 ಮನೆಗಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳಿಂದ 1,516 ಗ್ರಾಂ ಚಿನ್ನ ಹಾಗೂ 3,308 ಗ್ರಾಂ ಬೆಳ್ಳಿ ವಶಪಡಿಸಿಕೊಂಡಿದ್ದರು. ಹಿಂಡಲಗಾ ಜೈಲಿನಲ್ಲಿದ್ದ ಭೂಗತ ರೌಡಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ಬಂದಿದ್ದ ಗ್ಯಾಂಗ್‌ನ ಸಂಚನ್ನು ವಿಫಲಗೊಳಿಸಿ, ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದರು.

ಸೈಬರ್ ಅಪರಾಧಗಳ ವಿರುದ್ಧವೂ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿರುವ ಅವರು 2020ರಿಂದ 2022ರವರೆಗೆ ದಾಖಲಾಗಿದ್ದ 133 ಸೈಬರ್ ಹಣಕಾಸು ವಂಚನೆ ಪ್ರಕರಣಗಳಲ್ಲಿ ಆರೋಪಿಗಳ ಖಾತೆಗಳನ್ನು ಫ್ರೀಜ್ ಮಾಡಿಸಿ, ಸಂತ್ರಸ್ತರಿಗೆ ಒಟ್ಟು 4.95 ಕೋಟಿ ಹಣವನ್ನು ಮರಳಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2024ರ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಗುಜರಾತ್‌ನಿಂದ ಆರೋಪಿಗಳನ್ನು ಬಂಧಿಸಿ, 1.11 ಕೋಟಿ ಹಣವನ್ನು ಫ್ರೀಜ್ ಮಾಡಿಸಿ 30 ಲಕ್ಷವನ್ನು ಸಂತ್ರಸ್ತರಿಗೆ ಮರಳಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಳೆದ 2025ರಲ್ಲಿ ಅಂತರಾಷ್ಟ್ರೀಯ ಫ್ರಾಡ್ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ ಅಮೆರಿಕದ ಹಿರಿಯ ನಾಗರಿಕರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಿಸುತ್ತಿದ್ದ 33 ಮಂದಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಗಡ್ಡೆಕರ್ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲೂ ಸಾಧನೆ ಮಾಡಿ 50 ಕೆಜಿ 452 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದರು. ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯದಿಂದ ಶಿಕ್ಷೆಯಾಗುವಂತೆ ತನಿಖೆ ನಡೆಸಿರುವುದು ಅವರ ಸೇವೆಯ ಅತ್ಯುನ್ನತ ದಾಖಲೆಯಾಗಿದೆ.

ಬಿ.ಆರ್. ಗಡ್ಡೇಕರ್ ಅವರಿಗೆ ಈ ಹಿಂದೆ ಡಿಜಿ ಮತ್ತು ಐಜಿಪಿ, ಎಡಿಜಿಪಿ ಹಾಗೂ ಪೊಲೀಸ್ ಆಯುಕ್ತರಿಂದ ಹಲವು ಬಾರಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ಪಡೆದಿರುವ ಅವರಿಗೆ ಈಗ ರಾಷ್ಟ್ರಪತಿ ಪದಕ ದೊರೆತಿರುವುದು ಹೆಮ್ಮೆಯ ಸಂಗತಿ.