ಬೆಳಗಾವಿ : ಪತ್ರಕರ್ತರು ಹಾಗೂ ಪೊಲೀಸರ ಹೆಸರಿನಲ್ಲಿ ಬೆದರಿಕೆ ಹಾಕಿ ವ್ಯಕ್ತಿಯೊಬ್ಬರಿಂದ 1.60 ಲಕ್ಷ ಸುಲಿಗೆ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕರಣೆ ನೀಡಿರುವ ಅವರು, ಈ ಪ್ರಕರಣದಲ್ಲಿ ಕಲ್ಲಪ್ಪ ಬಸವಣ್ಣಿ ಮಾಳಾಜ್ (ಸಂಪೂರ್ಣ ಯೂಟ್ಯೂಬರ್), (ಆಂಜನೇಯ ನಗರ, ಹುಕ್ಕೇರಿ), ಮಲ್ಲಿಕಾರ್ಜುನ ಸಿದ್ದಪ್ಪ ಜುಲಫಿ (ಎಂ2 ಯೂಟ್ಯೂಬರ್), (ನಾಗರಮುನ್ನೋಳಿ, ಚಿಕ್ಕೋಡಿ), ಪೃಥ್ವಿರಾಜ್ ನಾರಾಯಣ ಚೌಹಾಣ್ (ಜಿ.ಡಿ. ಯೂಟ್ಯೂಬರ್ ಮೂಲ ಮಾನಗಾವ್, ಚಂದಗಡ; ಹಾಲಿ ಹೊಸವಂಟಮೂರಿ), ಡೇವಿಡ್ ಜಾಕೋಬ್ ತಂಗೇರಾಳ (ಜಿ.ಡಿ. ಯೂಟ್ಯೂಬರ್, ಗಣೇಶಪುರ, ಬೆಳಗಾವಿ) ಇವರುಗಳು ಬಂಧಿತರಾಗಿದ್ದಾರೆ.

ಜುಲೈ 18ರಂದು ಸಂಜೆ ಕೋಟಭಾಗಿ ಗ್ರಾಮದ ಮಹಿಬೂಬ್ ಬಾಬುಸಾಬ್ ಜಮಾದಾರ್ ಅವರಿಗೆ ಕಾಕತಿಯ ವ್ಯಕ್ತಿಯೊಬ್ಬ ಗಾಂಜಾ ಚೀಟಗಳನ್ನು ಬಲವಂತವಾಗಿ ನೀಡಿ 71,000 ಪಡೆದಿದ್ದನು. ಬಳಿಕ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡು, ಮಹಿಬೂಬ್ ಅವರನ್ನು ಸಮೀಪದ ಕಬ್ಬಿನ ಗದ್ದೆಗೆ ಕರೆದೊಯ್ದು ಗಾಂಜಾ ಪೊಟ್ಟಣಗಳ ಫೋಟೋ ಹಾಗೂ ವೀಡಿಯೋ ಚಿತ್ರೀಕರಿಸಿದ್ದಾರೆ.

ನಂತರ ಅವರನ್ನು ಕಾರಿನಲ್ಲಿ ಕರೆದುಕೊಂಡು ಹುಕ್ಕೇರಿ ಪೊಲೀಸ್ ಠಾಣೆ ಸಮೀಪಕ್ಕೆ ಕರೆತಂದು, ಗಾಂಜಾ ಮಾರಾಟ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ, ಮೊದಲು 72 ಲಕ್ಷ ಹಾಗೂ ಬಳಿಕ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ 1.60 ಲಕ್ಷ ನಗದು ಪಡೆದು, ಅವರ ವೀಡಿಯೋವನ್ನು ’ಜಿ.ಡಿ. ಟಿವಿ’ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 164/2026ರಡಿ ಭಾರತೀಯ ನ್ಯಾಯ ಸಂಹಿತೆ (ಃಓS) ಕಲಂ 319(2), 318(4), 140(2) ಹಾಗೂ 3(6) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರು ಗೋಕಾಕ ಡಿವೈಎಸ್‌ಪಿ ರವಿ ಡಿ. ನಾಯಕ್ ಅವರ ಮಾರ್ಗದರ್ಶನದಲ್ಲಿ, ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್.ಗಣಾಚಾರಿ ನೇತೃತ್ವದಲ್ಲಿ
ತಂಡವು ಜುಲೈ 24ರಂದು ಎಸ್.ಆರ್. ಗಣಾಚಾರಿ ಪೊಲೀಸ್‌ ಇನ್ಸ್‌ಪೆಕ್ಟರ್, ಹುಕ್ಕೇರಿ ಹಾಗೂ ಅವರ ತನಿಖಾ ತಂಡದ
ಸಿಬ್ಬಂದಿಗಳಾದ ಎ.ಎನ್. ಮಸರಗುಪ್ಪಿ, ಎಮ್.ಎಸ್. ಕಲ್ಕೂರ್, ಆರ್.ಎಮ್. ಪಡತಾರೆ, ಮತ್ತು ಆರ್.ಯು.ಹನುಮನವರ ಅವರನ್ನೊಳಗೊಂಡ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ ಮಾರುತಿ ಎರ್ಟಿಗಾ ಕಾರು, ಹೀರೋ ಡಿಲಕ್ಸ್ ಬೈಕ್, 2 ಮೊಬೈಲ್, ಸುಲಿಗೆ ಮಾಡಿದ 34,000 ನಗದು ಹೀಗೆ ಬಂಧಿತರಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಜೆಎಂಎಫ್‌ಸಿ, ಹುಕ್ಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.