ಮಕ್ಕಳಿಗೆ ಪಾಠ ಹೇಳಿಕೊಡಬೇಕಾದ ಶಿಕ್ಷಕರೇ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಕೌಜ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಓರ್ವ ಶಿಕ್ಷಕ ಹಾಗೂ ಶಿಕ್ಷಕಿ ತರಗತಿಯೊಳಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ವಿಡಿಯೊ ಆನ್‌ಲೈನ್‌ನಲ್ಲಿ (Viral News) ಕಾಣಿಸಿಕೊಂಡ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ಶಿಕ್ಷಕನು ಶಿಕ್ಷಕಿಗೆ ಮುತ್ತಿಕ್ಕುವ ದೃಶ್ಯ ಕಂಡು ಬಂದಿದೆ.
ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ತರಗತಿ ಕೊಠಡಿಯ ಒಳಗೇ ರೊಮ್ಯಾನ್ಸ್ ಮಾಡಿದ್ದಾರೆ. ವರದಿಗಳ ಪ್ರಕಾರ ಶಿಕ್ಷಕನ ಪತ್ನಿಗೆ ತನ್ನ ಪರಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡಿದ್ದಳು. ಹೀಗಾಗಿ ಆತನ ಪತ್ನಿ, ಸಾಕ್ಷಿ ಕಲೆಹಾಕಲು ತರಗತಿ ಕೊಠಡಿಯೊಳಗೆ ರಹಸ್ಯ ಕ್ಯಾಮರಾವನ್ನು ಅಳವಡಿಸಿದ್ದಳು. ಈ ಕ್ಯಾಮರಾದಲ್ಲಿ ಇಬ್ಬರೂ ಶಾಲಾ ಅವಧಿಯಲ್ಲೇ ಅಸಭ್ಯವಾಗಿ ವರ್ತಿಸಿರುವುದು ಕಂಡು ಬಂದಿದೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ ಸಂದೀಪ್ ಕುಮಾರ್ ಸೌರಿಖ್‌ನ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ವಿಶ್ವನಾಥ್ ಪಾಠಕ್ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಈ ಕೃತ್ಯ ಪರಿಶೀಲಿಸಿದ ನಂತರ ರಾಜ್ಯ ಶಿಕ್ಷಣ ಇಲಾಖೆ ಇಬ್ಬರನ್ನೂ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಂಡಿದೆ. ಈ ಘಟನೆಯು ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮತ್ತು ವೃತ್ತಿಪರ ನಡವಳಿಕೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


