ತಮಕೂರು: ನೆರೆಯ ಆಂಧ್ರಪ್ರದೇಶದಲ್ಲಿ (Andhra Pradesh) ಮಹಾಮಾರಿ ಕೋವಿಡ್ (Covid) ಸೋಂಕಿಗೆ ಇಬ್ಬರು ಬಲಿಯಾಗಿರುವ ಬೆನ್ನಲ್ಲೇ ಗಡಿ ಜಿಲ್ಲೆ ತುಮಕೂರಿನಲ್ಲಿ (Tumkur) ತೀವ್ರ ಆತಂಕ ಸೃಷ್ಟಿಯಾಗಿದೆ.

ಆಂಧ್ರಪ್ರದೇಶದಿಂದ ಸುದೀರ್ಘ ಗಡಿಯನ್ನೂ ಹಂಚಿಕೊಂಡಿರುವ ಪಾವಗಡ ತಾಲೂಕಿನ ರಂಗ ಹಳ್ಳಿ ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗಡಿ ಭಾಗಗಳಲ್ಲಿ ಬಿಗಿ ಕಾವಲು ನಿಯೋಜಿಸಲಾಗಿದೆ.

ಆಂಧ್ರಪ್ರದೇಶದಿಂದ ಪಾವಗಡ ತಾಲೂಕಿನ ಮೂಲಕ ಕರ್ನಾಟಕಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಗಡಿಯಲ್ಲೇ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಸೋಂಕು ರಾಜ್ಯದೊಳಗೆ ಹರಡದಂತೆ ತಡೆಯಲು ಆಂಧ್ರದೊಂದಿಗೆ ನೇರ ಸಂಪರ್ಕ ಹೊಂದಿರುವ ಪಾವಗಡದ ಐದು ಪ್ರಮುಖ ಗಡಿ ಭಾಗಗಳಲ್ಲಿ ತುರ್ತು ಆರೋಗ್ಯ ತಪಾಸಣಾ ಕೇಂದ್ರಗಳನ್ನು (ಚೆಕ್ ಪೋಸ್ಟ್) ಸ್ಥಾಪಿಸಲಾಗಿದೆ.

ತಾಲೂಕಿನ ರಾಜವಂತಿ, ನಾಗಲಮಡಿಕೆ, ಅರಸೀಕೆರೆ ಹಾಗೂ ಟಿ.ಎನ್. ಪೇಟೆ ಸೇರಿದಂತೆ ಒಟ್ಟು ಐದು ಆಯಕಟ್ಟಿನ ಸ್ಥಳಗಳಲ್ಲಿ ಈ ಕೇಂದ್ರಗಳು ಇಂದಿನಿಂದಲೇ ಕಾರ್ಯಾರಂಭ ಮಾಡಿವೆ.

ಈ ಎಲ್ಲ ಐದು ತಪಾಸಣಾ ಕೇಂದ್ರಗಳಲ್ಲಿ ಶಿಫ್ಟ್ ಆಧಾರದ ಮೇಲೆ ದಿನದ 24 ಗಂಟೆಯೂ ಕೆಲಸ ಮಾಡಲು ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಿ ಸೋಂಕು ಕ್ರಮ ಕೈಗೊಳ್ಳುವಂತೆ ಗಡಿ ಭಾಗದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಪಾವಗಡ ತಹಶೀಲ್ದಾರ್ ಅವರು ಅಧಿಕೃತ ಪತ್ರದ ಮೂಲಕ ಖಡಕ್ ಆದೇಶ ನೀಡಿದ್ದಾರೆ.

ಈ ಭೀತಿಯ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳು ನಿಯಮಿತವಾಗಿ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳಿಗೆಂದು ತುರ್ತು ಸಭೆ ನಡೆಸಿ, ಗಡಿ ಭಾಗಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಾವಗಡ ತಾಲೂಕು ಆಡಳಿತವು ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಜಾಗರೂಕರಾಗಿರುವಂತೆ ಮನವಿ ಮಾಡಿದೆ.