ಬೆಳಗಾವಿ : ನಗರದ ಪೀರನವಾಡಿಯಲ್ಲಿ ತಾಯಿ ಹಾಗೂ ಮೂರು ವರ್ಷದ ಮಗ ನೇಣಿಗೆ ಶರಣಾದ ಪ್ರಕರಣ ಸೋಮವಾರ ಹೊಸ ತಿರುವು ಪಡೆದುಕೊಂಡಿದ್ದು, ಮೃತರ ಮರಣೋತ್ತರ ಪರೀಕ್ಷೆ ವೇಳೆ ಬೀಮ್ಸ್ ಆಸ್ಪತ್ರೆ ಶವಗಾರದ ಮುಂದೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಆತ್ಮಹತ್ಯೆ ಮಾಡಿಕೊಂಡ ಪ್ರೇಮಾ ತಳವಾರ (28) ಹಾಗೂ ಪುತ್ರ ಭುವನ್ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೀಮ್ಸ್ ಶವಗಾರಕ್ಕೆ ತರಲಾಗಿತ್ತು. ಈ ವೇಳೆ ಮೃತಳ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪತಿ ನಾಗೇಶ ಅವರ ತಾಯಿ ಸುಶೀಲಾ ತಳವಾರ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಗ್ರಾಮೀಣ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಮೃತಳ ಕುಟುಂಬಸ್ಥರು, ಪ್ರೇಮಾ ಸಾವಿಗೆ ಅತ್ತೆ ಹಾಗೂ ಆಕೆಯ ಕುಟುಂಬಸ್ಥರೇ ನೇರ ಕಾರಣ ಎಂದು ಆರೋಪಿಸಿದರು. ಸುಮಾರು 10 ಲಕ್ಷ ಸಾಲ ಮಾಡಿದ್ದು, ಅದರ ಒತ್ತಡವನ್ನು ಪ್ರೇಮಾ ಮೇಲೆ ಹಾಕಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಇದೇ ಮಾನಸಿಕ ಹಿಂಸೆಯಿಂದ ಬೇಸತ್ತು ಪ್ರೇಮಾ ತನ್ನ ಮೂರು ವರ್ಷದ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಣ್ಣೀರಿಟ್ಟರು.

“ನಮ್ಮ ಮಗಳ ಸಾವಿಗೆ ನ್ಯಾಯ ದೊರಕಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಕುಟುಂಬಸ್ಥರು ಆಗ್ರಹಿಸಿದರು.

ಘಟನೆ ಹಿನ್ನೆಲೆಯಲ್ಲಿ ಬೀಮ್ಸ್ ಶವಗಾರದ ಮುಂದೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.