ಬೆಂಗಳೂರು : ಯಾವುದೇ ಪೊಲೀಸ್ ಅಧಿಕಾರಿಗಳು ಡೀಲ್ಗಳು ಹಾಗೂ ಅಪರಾಧಗಳಲ್ಲಿ ಭಾಗಿಯಾಗಬಾರದು. ಇಂತಹ ವಿಚಾರದಲ್ಲಿ ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಮನವಿ ಎಂದಾದರೂ ಭಾವಿಸಿ, ಸೂಚನೆ ಎಂದಾದರೂ ಭಾವಿಸಿ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಶನಿವಾರ ನಡೆದ ರಾಜ್ಯದ ಜಿಲ್ಲಾ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ವ್ಯಾನ್ಗಳು ಹಾಗೂ 75 ಬೊಲೆರೋ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿದರು.

ಪೊಲೀಸ್ ಇಲಾಖೆಗೆ ಹೊಸ ಶಕ್ತಿ ತುಂಬಲಾಗುತ್ತಿದೆ. ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಈ ಇಬ್ಬರಿಂದ ನಮ್ಮ ರಾಜ್ಯ ಹಾಗೂ ದೇಶ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿದೆ. ನಿಮಗೆ ಸರ್ಕಾರದ ಪರವಾಗಿ ಅಭಿನಂದನೆಗಳು. ಸಾಧನೆ ಸಾಮರ್ಥ್ಯಕ್ಕಿಂತ ನಿಮ್ಮ ಗುರಿ ನಿರ್ಧಾರ ಮಾಡಿದಾಗ ಜಯ ನಿಮ್ಮದಾಗಲಿದೆ ಎಂದರು.

ಪೊಲೀಸರು ಒಂದು ವರ್ಷದಲ್ಲಿ 375 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು 1,500 ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಇಡೀ ದೇಶ ಕರ್ನಾಟಕವನ್ನು ಗಮನಿಸುತ್ತಿದೆ. ಡ್ರಗ್ಸ್ ಜಾಲವನ್ನು ಭೇದಿಸಿದ ತಂಡಕ್ಕೆ ಸರ್ಕಾರ 10 ಲಕ್ಷದ ನಗದು ಬಹುಮಾನ ನೀಡಲು ತೀರ್ಮಾನಿಸಿದೆ. ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿಯೊಬ್ಬ ನಾಗರಿಕನೂ ಇಲಾಖೆ ಮೇಲೆ ಗೌರವ ಇಟ್ಟುಕೊಳ್ಳುವಂತೆ ಕೆಲಸ ಮಾಡಬೇಕು. ನಿಮ್ಮ ಯಶಸ್ಸೇ ಸರ್ಕಾರದ ಯಶಸ್ಸು” ಎಂದು ತಿಳಿಸಿದರು.

“ಇತ್ತೀಚೆಗೆ ಕೇರಳ ಗೃಹಸಚಿವರಾದ ರಮೇಶ್ ಚೆನ್ನಿತ್ತಾಲ ಅವರು ನನ್ನನ್ನು ಭೇಟಿ ಮಾಡಿ ಕರ್ನಾಟಕ ಗಡಿ ದಾಟಿ ಯಾವುದೇ ಮಾದಕ ವಸ್ತು ಕೇರಳ ಗಡಿ ಮೂಲಕ ಹೋಗಬಾರದು ಎಂಬ ವಿಚಾರವಾಗಿ ಕೆಲವು ಮಾಹಿತಿ ಹಾಗೂ ಮನವಿ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಮಾದಕ ವಸ್ತು ಬರದಂತೆ ತಡೆಯಲಾಗುವುದು ಎಂದು ಅವರಿಗೆ ಆಶ್ವಾಸನೆ ನೀಡಿದ್ದೇನೆ” ಎಂದು ತಿಳಿಸಿದರು.