ಬೆಳಗಾವಿ : ಜುಲೈ ತಿಂಗಳಲ್ಲಿ ಅತ್ಯಂತ ಕಡಿಮೆ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ನಮ್ಮ ಜಲಾಶಯಗಳಲ್ಲಿ ನೀರು ಡೆಡ್ ಸ್ಟೋರೇಜ್ ಮಟ್ಟಕ್ಕೆ ತಲುಪಿದ್ದು, ಇರುವ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಬುಧವಾರ ಜರುಗಿದ ಕಂದಾಯ ದಿನಾಚರಣೆ-2026 ಹಾಗೂ ಬೆಳಗಾವಿ ವಿಭಾಗದ ಹವಾಮಾನ ಪರಿಸ್ಥಿತಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಮುಂಗಾರು ವಾಡಿಕೆಗಿಂತ ಕಡೆಮೆಯಾಗಿದ್ದು, ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ನಿಗಾವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಉದ್ಬವಿಸಿದಲ್ಲಿ ಟ್ಯಾಂಕರ್ ಹಾಗೂ ಖಾಸಗಿ ಬೋರವೆಲ್‌ಗಳ ಮೂಲಕ ನೀರು ಪೂರೈಕೆಗೆ ಕೂಡಲೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಕೆನಾಲ್‌ಗಳಲ್ಲಿನ ಪಂಪಸೆಟ್‌ಗಳನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಗ್ರಾಮೀಣ, ನಗರ ಪ್ರದೇಶಗಳಲ್ಲಿ ನೀರಿನ ಕೊರತೆಯಾದ ಕುರಿತು ದೂರುಗಳು ಬರದಂತೆ ನಿಗಾವಹಿಸಬೇಕು. ಮಳೆ ಕೊರತೆಯಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಅಗತ್ಯದ ಮೇವು ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಈಗಿನಿಂದಲೇ ಜಿಲ್ಲಾವಾರು ಮೇವು ದಾಸ್ತಾನು ಮಾಡಿಕೊಳ್ಳಬೇಕು.
ಈಗಾಗಲೇ ಬೆಳಗಾವಿ 34, ವಿಜಯಪುರ 24, ಬಾಗಲಕೋಟೆ 5, ಧಾರವಾಡ 27, ಗದಗ 25, ಹಾವೇರಿ 11 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆರಂಭಿಕ ಹಂತದಲ್ಲೇ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಕ್ತ ತಿಳುವಳಿಕೆ ಮೂಡಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ವಿಪತ್ತು ನಿರ್ವಹಣಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ, ಪಶುಸಂಗೋಪನ ಇಲಾಖೆಯ ಕಾರ್ಯದರ್ಶಿಗಳಾದ ವಿನೋದ್ ಪ್ರಿಯ, ಕಂದಾಯ ಇಲಾಖೆಯ ಆಯುಕ್ತರಾದ ಮೀನಾ ನಾಗರಾಜ್, ಭೂಮಾಪನ ಮತ್ತು ಭೂ ದಾಖಲೆಗಳ ಆಯುಕ್ತರಾದ ವೆಂಕಟರಾಜಾ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಹೊನ್ನಾಂಬ, ಕಂದಾಯ ಇಲಾಖೆಯ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ., ಪಶುಸಂಗೋಪನಾ ಇಲಾಖೆಯ ಆಯುಕ್ತರಾದ ಶಿಲ್ಪಾ ನಾಗರಾಜ್ ಅವರು ಹಾಗೂ ಬೆಳಗಾವಿ ವಿಭಾಗದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.



