ತುಮಕೂರು : ಜಿಲ್ಲೆಯ (Tumkur) ಪಾವಗಡ ತಾಲೂಕಿನಲ್ಲಿ ಅತ್ಯಂತ ಮನಕಲಕುವ ಫಟನೇ ನಡೆದಿದ್ದು ರಸ್ತೆ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ.

ನನ್ನೆಯಷ್ಟೇ ಶೋರೂಮ್ ನಿಂದ ಅತ್ಯಂತ ಸಂಬ್ರಮದಿಂದ ಹೊಸ ಬೈಕ್ ಖರೀದಿಸಿದ ಯುವಕನೊಬ್ಬ, ಅದೇ ಬೈಕ್‌ನಲ್ಲಿ ತನ್ನ ಮೊದಲ ರೈಡ್ ಹೊರಟಿದ್ದಾಗ ಟಿಪ್ಪರ್ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ಈ ಭೀಕರ ಘಟನೆ ನಡೆದಿದ್ದು, ದೊಡ್ಡಹಳ್ಳಿ ಗ್ರಾಮದ ನಿವಾಸಿ ನಂದೀಶ್ ಕುಮಾರ್ (19) ಮೃತಪಟ್ಟ ದುರ್ದೈವಿ ಯುವಕ.

ಮೂಲತಃ: ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ನಿವಾಸಿಯಾದ ನಂದೀಶ್ ಕುಮಾರ್, ನಿನ್ನೆಯಷ್ಟೇ ಹೊಸ ಬೈಕ್ ಅನ್ನು ಶೋರೂಮ್‌ನಿಂದ ಡೆಲಿವರಿ ಪಡೆದುಕೊಂಡಿದ್ದ. ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಆತ, ಇಂದು ತನ್ನ ಆಪ್ತ ಗೆಳೆಯ ಜಿರು ಎಂಬಾತನನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬೈಕ್ ಚಲಾಯಿಸುತ್ತಾ ಪಾವಗಡ ಕಡೆಗೆ ಬರುತ್ತಿದ್ದ. ಇಬ್ಬರು ಗೆಳೆಯರು ಹೊಸ ಬೈಕ್‌ನಲ್ಲಿ ಸಾಗುತ್ತಿದ್ದಾಗ ವಿಧಿಯ ಆಟವೇ ಬೇರೆಯಾಗಿತ್ತು.

ಇಬ್ಬರೂ ಗಂಗಸಾಗರ ಕ್ರಾಸ್ ತಲುಪುತ್ತಿದ್ದಂತೆ, ವ್ಯಾನ್ ಹೋಸಕೋಟೆ ಕಡೆಯಿಂದ ಅತಿವೇಗವಾಗಿ ಮತ್ತು ಬೇಜವಾಬ್ದಾರಿಯಿಂದ ಬಂದ ಟಿಪ್ಪರ್ ಲಾರಿಯೊಂದು ನಂದೀಶ್ ಅವರ ಹೊಸ ಬೈಕ್‌ಗೆ ನೇರವಾಗಿ ಮತ್ತು ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ತೀವ್ರವಾಗಿ ಗಾಯಗೊಂಡ ನಂದೀಶ್ ರಸ್ತೆಯ ಮಧ್ಯಭಾಗದಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.