Select Page

Advertisement

ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ಅಥಣಿ: ಉತ್ತರ ಕರ್ನಾಟಕದ ಪ್ರಭಾವಿ ಹಿರಿಯ ರಾಜಕಾರಣಿ ಹಾಗೂ ದಲಿತ ಸಮುದಾಯದ ಪ್ರಬಲ ನಾಯಕ ಆರ್.ಬಿ. ತಿಮ್ಮಾಪುರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ರಾಜ್ಯ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ ಹಾಗೂ ದಲಿತ ಮುಖಂಡರು ಒತ್ತಾಯಿಸಿದ್ದರು.

ಅಥಣಿ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್.ಬಿ. ತಿಮ್ಮಾಪುರ ಅವರು ಉತ್ತರ ಕರ್ನಾಟಕದ ಹಿರಿಯ ಶಾಸಕರಾಗಿದ್ದು, ಈ ಹಿಂದೆ ಅನೇಕ ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಬಾಗಲಕೋಟೆ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಅವರ ಗೆಲುವಿನಲ್ಲಿ ತಿಮ್ಮಾಪುರ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು ಎಂದು ಸ್ಮರಿಸಿದರು.

ತಮ್ಮ ರಾಜಕೀಯ ಬದುಕಿನುದ್ದಕ್ಕೂ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಪಕ್ಷದ ಸಂಘಟನೆಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅವರ ಈ ನಿಸ್ವಾರ್ಥ ಶ್ರಮವನ್ನು ಪರಿಗಣಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಅವರಿಗೆ ಪ್ರಮುಖ ಖಾತೆಯ ಸಚಿವ ಸ್ಥಾನವನ್ನು ನೀಡಬೇಕು ಎಂದು ಅವರು ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ನಿರ್ದೇಶಕಿ ಹಾಗೂ ಎಐಸಿಸಿ ಸಂಯೋಜಕಿ ಸುನಿತಾ ಐಹೊಳೆ ಮಾತನಾಡಿ, ಉತ್ತರ ಕರ್ನಾಟಕದ ದಲಿತ ಸಮುದಾಯದ ಹಿರಿಯ ನಾಯಕರಾಗಿರುವ ಆರ್.ಬಿ. ತಿಮ್ಮಾಪುರ ಅವರು ನಾಲ್ಕೈದು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿ, ರಾಜ್ಯಕ್ಕೆ ತಮ್ಮದೇ ಆದ ಅನೇಕ ಅಭಿವೃದ್ಧಿ ಕೊಡುಗೆಗಳನ್ನು ನೀಡಿದ್ದಾರೆ.

ಹೀಗಾಗಿ, ರಾಜ್ಯ ಹಾಗೂ ಕೇಂದ್ರದ ವರಿಷ್ಠರು ಅವರಿಗೆ ಮಂತ್ರಿ ಸ್ಥಾನವನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಥಣಿ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಹನುಮಂತ ಅರ್ದಾಯೂರ, ಸಮಾಜದ ಮುಖಂಡರಾದ ಕುಮಾರ ಗಸ್ತಿ, ಸಂತೋಷ್ ಹಾದಿಮನಿ, ಸದಾಶಿವ ದೊಡ್ಡಮನಿ, ಸುದೀಪ್ ಐಹೊಳೆ, ಸತೀಶ್ ಕುಲ್ಲೊಳ್ಳಿ, ಪ್ರಶಾಂತ್ ಆಚಾರಟ್ಟಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.


Advertisement

Leave a reply

Your email address will not be published. Required fields are marked *

error: Content is protected !!