ಬೆಳಗಾವಿ : ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ; ಅಮಾನವೀಯ ಕೃತ್ಯಕ್ಕೆ ಆಕ್ರೋಶ..!
ಬೆಳಗಾವಿ : ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಕುರುಬ ಸಮಾಜದ ಒಂದು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊಂಡುಸಕೊಪ್ಪ ಗ್ರಾಮದ ಕೆಲ ಪಂಚರು ದೇವಸ್ತಾನ ಪೂಜೆ ಹಾಗೂ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಂಡಿದ್ದಾರೆ. ಕುಟುಂಬದವರೊಂದಿಗೆ ಮಾತನಾಡಿದರೆ 5000 ರೂ. ದಂಡ ವಿಧಿಸುವುದಾಗಿ ಹಾಗೂ ಮಾಹಿತಿ ನೀಡಿದವರಿಗೆ 1000 ರೂ. ಬಹುಮಾನ ಘೋಷಿಸಿದ್ದಾರೆ ಎನ್ನುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬಹಿಷ್ಕಾರದ ಪರಿಣಾಮವಾಗಿ ಕುಟುಂಬ ಸಂಪೂರ್ಣ ಒಂಟಿಯಾಗಿದ್ದು, ಮದುವೆ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೇ ದೂರವಿರಲಾಗುತ್ತಿದೆ. ಐದು ವರ್ಷದ ಮಗುವಿನೊಂದಿಗೆ ಗ್ರಾಮಸ್ಥರು ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲ ದಿನಗಳ ಹಿಂದೆ ತಡರಾತ್ರಿ ದುಷ್ಕರ್ಮಿಗಳು ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಮನೆಯೊಳಗೆ ಗಾಜಿನ ಚೂರುಗಳು ಚೆಲ್ಲಾಪಿಲ್ಲಿಯಾಗಿದ್ದು, ಕುಟುಂಬ ಜೀವ ಭಯದಲ್ಲಿ ದಿನ ಕಳೆಯುತ್ತಿದೆ. ರಕ್ಷಣೆಗೆ ಆಗ್ರಹಿಸಿ ಕುಟುಂಬವು ಪೊಲೀಸರಿಗೆ ಮನವಿ ಮಾಡಿದೆ.
ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಹದಿನೈದು ದಿನಗಳಾದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಿಂತಿರುಗಿರುವುದರಿಂದ ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ನಮಗೂ ಬದುಕಲು ಅವಕಾಶ ನೀಡಬೇಕು” ಎಂದು ಪೀಡಿತ ಕುಟುಂಬ ಮನವಿ ಮಾಡಿದ್ದು, ಊರು ಬಿಡುವಂತೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

