ಶಾಸಕ ವಿನಯ್ ಕುಲಕರ್ಣಿಗೆ ಸಿಹಿ ಸುದ್ದಿ ಕೊಟ್ಟ ಸುಪ್ರೀಂಕೋರ್ಟ್
ಬೆಳಗಾವಿ : ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಕೊಲೆ (Yogesh gowda murder) ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ (Vinay Kulakarni) ಸುಪ್ರೀಂ ಕೋರ್ಟ್ (Supreme court) ಜಾಮೀನು (bail) ನೀಡಿದೆ.
ಸುಪ್ರೀಂ ಕೋರ್ಟ್ ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದು, ಸದ್ಯ ಕುಲಕರ್ಣಿಗೆ ರಿಲೀಫ್ ಸಿಕ್ಕಿದೆ. ಇತ್ತೀಚಿಗೆ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು. ಬಳಿಕ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಕುಲಕರ್ಣಿ ಪರ ವಾದ ಮಂಡಿಸಿದ್ದ ವಕೀಲ ಶರಣಗೌಡ ಪಾಟೀಲ್ ಅವರ ತಂಡ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಶಾಸಕ ವಿನಯ್ ಕುಲಕರ್ಣಿ ಜಾಮೀನು ಪಡೆಯುವ ಮೂಲಕ ನ್ಯಾಯ ಪ್ರಕ್ರಿಯೆಯಲ್ಲಿ ಮುಂದಿನ ಹಂತಕ್ಕೆ ಸಾಗಿದ್ದಾರೆ. ಸುಪ್ರೀಂ ಕೋರ್ಟ್ನ ನ್ಯಾ. ಸಂಜಯ್ ಕರೋಲ ಅವರ ಪೀಠದಿಂದ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಮಂಜೂರಾಗಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ವಿನಯ್ ಕುಲಕರ್ಣಿ ಶರಣಾಗಿದ್ದರು. ಸಾಕ್ಷಿಗಳಿಗೆ ಬೆದರಿಕೆ ಆರೋಪದ ಮೇಲೆ ಜಾಮೀನು ರದ್ದಾಗಿತ್ತು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ವಿನಯ್ ಕುಲಕರ್ಣಿ ಅವರ ಜಾಮೀನು ರದ್ದು ಮಾಡುವಂತೆ ಸಿಬಿಐ ಮನವಿ ಮಾಡಿತ್ತು.


