Select Page

Advertisement

ಸೇಡು ತೀರಿಸಿಕೊಳ್ಳಲು ನಕಲಿ ಪತ್ರಕರ್ತರ ಬಳಸಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ; ಪ್ರಕರಣದ ಕಿಂಗ್ ಪಿನ್ ಬಂಧನ

ಸೇಡು ತೀರಿಸಿಕೊಳ್ಳಲು ನಕಲಿ ಪತ್ರಕರ್ತರ ಬಳಸಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ; ಪ್ರಕರಣದ ಕಿಂಗ್ ಪಿನ್ ಬಂಧನ



ಬೆಳಗಾವಿ : ಮಹಿಳಾ ಅಧಿಕಾರಿಯ ಮನೆಯಲ್ಲಿ ಬಲ್ಬ್ ಹೋಲ್ಡರ್‌ನಲ್ಲಿ ಹಿಡನ್ (ರಹಸ್ಯ) ಕ್ಯಾಮರಾ ಅಳವಡಿಸಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಈ ದುಷ್ಕೃತ್ಯದ ಹಿಂದೆ ಸರ್ಕಾರಿ ಅಧಿಕಾರಿಯೇ ಸಂಚು ರೂಪಿಸಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ವೃತ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿಯ ತೇಜೋವಧೆ ಮಾಡುವ ಉದ್ದೇಶದಿಂದ ಹಿಡನ್ (ರಹಸ್ಯ) ಕ್ಯಾಮರಾ ಅಳವಡಿಸುವ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ವಿನೋದ್ ಟಿ ಎಂಬ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ.

ಆರೋಪಿಯ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಮಹಿಳಾ ಅಧಿಕಾರಿಯ ವಿರುದ್ಧ ನಕಲಿ ಪತ್ರಕರ್ತರನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುವ ಯತ್ನ ನಡೆದಿದ್ದು, ಅದರಿಂದ ಬಂದ ಹಣದಲ್ಲಿ ನಕಲಿ ಪತ್ರಕರ್ತರು ಹಾಗೂ ವಿನೋದ್ ಟಿಗೆ ಪಾಲು ಇತ್ತು ಎನ್ನಲಾಗಿದೆ.

ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಮನೆ ಬಲ್ಬ್ ಹೋಲ್ಡರ್‌ಗಳಲ್ಲಿ ಒಟ್ಟು 8 ರಹಸ್ಯ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಇದೇ ಮಹಿಳಾ ಅಧಿಕಾರಿ ವಿನೋದ್‌ನ ವರ್ಗಾವಣೆಗೆ ಕಾರಣರಾಗಿದ್ದ ಹಿನ್ನೆಲೆಯಲ್ಲಿ, ಸೇಡು ತೀರಿಸಿಕೊಳ್ಳಲು ಅವನು ಅಡ್ಡಮಾರ್ಗ ಹಿಡಿದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಹಿಡನ್ (ರಹಸ್ಯ) ಕ್ಯಾಮರಾ ಮೂಲಕ ವೀಡಿಯೊ ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳುವ ಸಂಪೂರ್ಣ ಸ್ಕೇಚ್ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇದೀಗ ಮಹಿಳಾ ಅಧಿಕಾರಿಯ ಕಚೇರಿಯಲ್ಲಿದ್ದ ಮತ್ತೊಬ್ಬ ಅಧಿಕಾರಿಯನ್ನೂ ವಶಕ್ಕೆ ಪಡೆದಿದ್ದಾರೆ.

ಬ್ಲ್ಯಾಕ್‌ಮೇಲ್‌ನಿಂದ ಬಂದ ಹಣದಲ್ಲಿ ಮನೆ ಕಟ್ಟುವ ಯೋಜನೆಯೂ ಇತ್ತು ಎನ್ನಲಾಗಿದೆ. ಕೊನೆಗೂ ಪೊಲೀಸರ ಖೆಡ್ಡಾಕ್ಕೆ ಬಿದ್ದ ವಿನೋದ್ ಟಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ರವಾನಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!