ಲಕ್ಷ್ಮಣ ಸವದಿ ವಿರುದ್ಧ ತಿರುಗಿಬಿದ್ದ ಮೂಲ ಕಾಂಗ್ರೆಸ್ಸಿಗರು ; ಕೃಷ್ಣಾ ಕಾರ್ಖಾನೆ ಚುನಾವಣೆಗೆ ಅಖಾಡ ತಯಾರಿ..!
ಅಥಣಿ : ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ಕಣ ರಂಗೇರಿದ ಸಂದರ್ಭದಲ್ಲೇ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸ್ವಕ್ಷೇತ್ರದಲ್ಲೇ ಮತ್ತೊಂದು ತಲೆನೋವು ಬಂದೊದಗಿದೆ. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಹಿನ್ನಲೆಯಲ್ಲಿ ಈಗ ಸ್ವ ಪಕ್ಷದ ನಾಯಕರೇ ಸವದಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಹೌದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಮೂಲ ಹಾಗೂ ವಲಸಿಗ ಕಾಂಗ್ರೆಸ್ ಎಂಬ ಅಸಮಾಧಾನ ಹೊರಹಾಕಲು ಸಾಧ್ಯವಾಗಿಲ್ಲ. ಸವದಿಗಾಗಿ ತಮ್ಮ ಟಿಕೆಟ್ ತ್ಯಾಗ ಮಾಡಿದ್ದ ಗಜಾನನ ಮಂಗಸೂಳಿ ಅವರಿಗೆ ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ನೋವಿದೆ.
ಸಧ್ಯ ಇದೇ ಕಾರಣಕ್ಕೆ ಗಜಾನನ ಮಂಗಸೂಳಿ ಹಾಗೂ ತಂಡ ಸವದಿ ವಿರುದ್ಧ ತಿರುಗಿ ಬಿದ್ದಿದ್ದು ಬರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಗೆ ಅಖಾಡ ಸಿದ್ಧಗೊಳಿಸಿದ್ದಾರೆ. ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಶಹಾಜಾನ್ ಡೊಂಗರಗಾಂವ ಜೊತೆ ಸೇರಿ ತಮ್ಮದೆ ಒಂದು ಸ್ವಾಭಿಮಾನಿ ರೈತ ಫೆನಲ್ ಮಾಡಿಕೊಂಡಿದ್ದಾರೆ.
ಇದೇ ಅಕ್ಟೋಬರ್ 26 ರಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಆಯ್ಕೆ ಚುನಾವಣೆ ನಡೆಯಲಿದೆ. ಸವದಿ ಬಣದಿಂದ ಹಾಲಿ ನಿರ್ದೇಶಕರು ಕಣಕ್ಕೆ ಇಳಿಯಲಿದ್ದರೆ ವಿರೋಧಿ ಬಣದಿಂದ ಮೂಲ ಕಾಂಗ್ರೆಸ್ಸಿಗರು ಹಾಗೂ ಬಿಜೆಪಿ ಜೊತೆ ಸೇರಿ ತಂಡ ಸಿದ್ಧಗೊಂಡಿದೆ.


