ಬೆಳಗಾವಿ : ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆ ಕಣ ರಂಗೇರಿದೆ. ಈ ನಡುವೆ ರಾಮದುರ್ಗದಲ್ಲಿ ಹಾಲಿ ಶಾಸಕ ಅಶೋಕ ಪಟ್ಟಣ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಹೌದು ಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆಗೆ ರಾಮದುರ್ಗ ಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ ಬಣದ ಹಾಲಿ ನಿರ್ದೇಶಕ ಶ್ರೀಕಾಂತ ಢವಣ ಹಾಗೂ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಸ್ಪರ್ಧೆ ಮಾಡಿದ್ದಾರೆ. ಆದರೆ ಈ ಇಬ್ಬರಲ್ಲಿ ಗೆಲ್ಲುವವರು ಯಾರು ಎಂಬುದೇ ಕುತೂಹಲ ಮೂಡಿಸಿದೆ.

ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶಾಸಕ ಅಶೋಕ್ ಪಟ್ಟಣ ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡದಿದ್ದಾರೆ. ಸಧ್ಯ ಕಣದಲ್ಲಿ ಇಬ್ಬರಿದ್ದು ಇವರಲ್ಲಿ ಯಾರಿಗೆ ಶಾಸಕರ ಆಶಿರ್ವಾದ ಎಂಬ ಪ್ರಶ್ನೆ ಸಾಮಾನ್ಯವಾಗಿದೆ.

ಮೂಲಗಳ ಪ್ರಕಾರ ಮಲ್ಲಣ್ಣ ಯಾದವಾಡ ಗೆಲುವಿನ ಹುಮ್ಮಸ್ಸಿನಲ್ಲಿರುವುದು ಸ್ಪಷ್ಟ. ಆದರೆ ಕೊನೆ ಕ್ಷಣದಲ್ಲಿ ಸಾಹುಕಾರರು ಆಡುವ ಆಟ‌ ಸಂಪೂರ್ಣ ಚಿತ್ರಣವನ್ನೂ ಬದಲಿಸಬಹುದು. ‌ಆದರೆ ಶಾಸಕ ಅಶೋಕ್ ಪಟ್ಟಣ ತ್ಯಾಗದ ಮೇಲೆ ಮತ್ತೊಬ್ಬರ ಗೆಲುವು ನಿರ್ಧಾರವಾಗಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂದಿಗ್ಧ ಪರಿಸ್ಥಿತಿ ಏರ್ಪಟ್ಟ ಸಂದರ್ಭದಲ್ಲಿ ಹಾಲಿ ಶಾಸಕರಿಗೆ ಮಾಜಿ ಶಾಸಕರು ಮಾಡಿದ ಸಹಾಯ ಈಗ ಮತ್ತೊಮ್ಮೆ ನೆರವೇರುವ ಲಕ್ಷಣ ತಳ್ಳಿಹಾಕುವಂತಿಲ್ಲ. ಇದೇ ಕಾರಣಕ್ಕೆ ರಾಮದುರ್ಗ ಡಿಸಿಸಿ ಕಣ ಕುತೂಹಲ ಮೂಡಿಸಿದೆ.