
SL BHYRAPPA: ಸಾಹಿತ್ಯ ದೊರೆ ಎಸ್‌ಎಲ್ ಬೈರಪ್ಪ ಪಂಚಭೂತಗಳಲ್ಲಿ ಲೀನ

ಮೈಸೂರು: ಬದುಕಿನ ಯಾನ ಮುಗಿಸಿರುವ ಕನ್ನಡದ ಸಾಹಿತ್ಯ ಲೋಕದ ದಿಗ್ಗಜ ಎಸ್‌ಎಲ್ ಬೈರಪ್ಪ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಬ್ರಾಹ್ಮಣ ಸಮಾಜದ ಸಂಪ್ರದಾಯದಂತೆ ಬೈರಪ್ಪ ಅವರ ಅಂತ್ಯಕ್ರಿಯೆ ನೆರವೇರಿದೆ.
ಬೈರಪ್ಪ ಅವರ ಮೈಸೂರಿನಲ್ಲಿರುವ ನಿವಾಸದಲ್ಲಿ ಅಂತಿಮ ವಿಧಿ ವಿಧಾನಗಳು ನಡೆದು, ನಂತರ ಅವರ ಪಾರ್ಥೀವ ಶರೀರವನ್ನು ರುದ್ರಭೂಮಿಗೆ ತರಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅವರ ಚಿತೆಗೆ ಬೈರಪ್ಪ ಅವರ ಇಬ್ಬರು ಪುತ್ರರು ಹಾಗೂ ಮಗಳಂತೆ ನೋಡಿಕೊಂಡಿದ್ದ ಲೇಖಕಿ ಸಹನಾ ವಿಜಯಕುಮಾರ್ ಅಗ್ನಿಸ್ಪರ್ಶ ಮಾಡಿದ್ದಾರೆ.
ಬೈರಪ್ಪ ಅವರ ಅಂತ್ಯಕ್ರಿಯೆಯ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.