ಬೆಳಗಾವಿ : ಖಾಸಗಿ ಶಾಲೆಗಳು‌ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತವೆ ಎಂಬುದು ಎಷ್ಟು ಸತ್ಯವೋ ಅಷ್ಟೇ ಪೋಷಕರ ಬಳಿ ಹಣಕ್ಕಾಗಿ ರಕ್ತ ಹೀರುತ್ತವೆ ಎಂಬುದಕ್ಕೆ ಇಲ್ಲೊಂದು ಶಾಲೆ ಜ್ವಲಂತ ಉದಾಹರಣೆಯಾಗಿದೆ.

ಹೌದು ಅಥಣಿ ತಾಲೂಕಿನ ಸಾಯಿನಿಕೇತನ ಶಿಕ್ಷಣ ಸಂಸ್ಥೆಯ ಅಂದಾ ದರ್ಬಾರ್ ಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ವತಃ ಮಕ್ಕಳ‌ ಪೋಷಕರೇ ಹೇಳಿಕೊಳ್ಳುತ್ತಿದ್ದಾರೆ. ಶುಲ್ಕ ಕಟ್ಟಲು ಕೊಂಚ ತಡವಾದರೆ ಮಕ್ಕಳ ಭವಿಷ್ಯ ಬೀದಿಗೆ ಬೀಳುವ ಭಯದಲ್ಲಿ ದಿನಗಳೆಯುತ್ತಿದ್ದಾರೆ.

ಈಗಾಗಲೇ ಶಾಲೆಯ ಮಧ್ಯಂತರ ಅವಧಿ‌ ಮುಕ್ತಾಯದ ಹಂತ ತಲುಪಿದ್ದು ಇನ್ನೇನು ಪರೀಕ್ಷೆ ನಡೆಯಲಿವೆ. ಆದರೆ ಮುಂಬರುವ ಅವಧಿಯ ಶುಕ್ಕ‌ ಕಟ್ಟಿದರೆ ಮಾತ್ರ ಮಕ್ಕಳ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ ಇಲ್ಲವಾದರೆ ‌ಮಕ್ಕಳಿಗೆ ಯಾವುದೇ ರೀತಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಾಯಿನಿಕೇತನ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಕಟ್ಟಪ್ಪಣೆ ಹೊರಡಿಸಿದೆ.

ಸಂಕಷ್ಟದಲ್ಲಿರುವ ಕೆಲ ಪೋಷಕರು ಶುಲ್ಕ ಕಟ್ಟಲು ಅವಕಾಶ ಕೇಳಿದರೂ ಸಂಸ್ಥೆ ನೀಡುತ್ತಿಲ್ಲ. ಜೊತೆಗೆ ಹಣ ಕಟ್ಟದ ಕಾರಣ ಹೇಳಿ ಮಕ್ಕಳಿಗೆ ಪರೀಕ್ಷೆ ಬರೆಯಲೂ ಅವಕಾಶ ನೀಡದೆ ಮಾನವೀಯತೆ ಇಲ್ಲದಂತೆ ವರ್ತನೆ ತೋರುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಶಾಲಾ ಆಡಳಿತ ಮಂಡಳಿ ವಾಟ್ಸಪ್ ಮುಖಾಂತರ ಪೋಷಕರಿಗೆ ನೀಡುತ್ತಿರುವ ಕಿರುಕುಳ‌ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.