ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಕಾಳಗ ತಾರಕಕ್ಕೇರಿದ್ದು ಸಚಿವ ಸತೀಶ್ ಜಾರಕಿಹೊಳಿಯನ್ನು ಬೆಂಬಲಿಸಿದ್ದಕ್ಕೆ ಪತಿಯನ್ನೇ ಪತ್ನಿ ಎಳೆದು ಹೊಡೆದ ಘಟನೆ ಹುಕ್ಕೇರಿ ತಾಲೂಕಿನ‌ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ತಾಲೂಕಿನ ಮದಿಹಳ್ಳಿ ಗ್ರಾಮದ ಪಿಕೆಪಿಎಸ್ ಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದ್ದರು. ಈ ವೇಳೆ ರಮೇಶ್ ಕತ್ತಿ ಬೆಂಬಲಿಗನಾಗಿದ್ದ ಪಿಕೆಪಿಎಸ್ ನಿರ್ದೇಶಕ ಮಾರುತಿ ಸನದಿ ಎಂಬಾತ ಸಚಿವ ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡಲು ಆಗಮಿಸಿದ್ದ. ಈ ಬೆನ್ನಲ್ಲೇ ಆಕ್ರೋಶಗೊಂಡ ಆತನ ಪತ್ನಿ ಸಚಿವರ ಎದುರಲ್ಲೇ ಕೊರಳ ಪಟ್ಟಿ ಹಿಡಿದು ಹೊಡೆದಿದ್ದಾಳೆ.

ಕಳೆದ ಹದಿನೈದು ದಿನದಿಂದ, ಮದಿಹಳ್ಳಿ ಪಿಕೆಪಿಎಸ್ ನಿಂದ ಮೂವರು ನಿರ್ದೇಶಕರನ್ನು ಹೈಜಾಕ್ ಮಾಡಿರುವ ಸತೀಶ್ ಜಾರಕಿಹೊಳಿ ಬೆಂಬಲಿಗರು ಅಜ್ಞಾತ ಸ್ಥಳದಲ್ಲಿ‌ ಇರಿಸಿದ್ದರು.
ಹೈಜಾಕ್ ಒಳಪಟ್ಟವರು ಮೂಲತಃ ರಮೇಶ್ ಕತ್ತಿ ಬೆಂಬಲಿಗರು. ಇದೇ ಕಾರಣಕ್ಕೆ ಪಿಕೆಪಿಎಸ್ ನಿರ್ದೇಶಕ ಮಾರುತಿ ಸನದಿಯನ್ನು ಆತನ ಪತ್ನಿ ಲಗಮವ್ವ ಸನದಿ ಸಚಿವರ ಎದುರಲ್ಲೇ ಹೊಡೆದು ರಮೇಶ್ ಕತ್ತಿ ಬೆಂಬಲಿಸುವಂತೆ ಆಗ್ರಹಿಸಿದ್ದಾಳೆ. ಈ ವೇಳೆ ಜಾರಕಿಹೊಳಿ ಹಾಗೂ ಕತ್ತಿ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.