ಬೆಳಗಾವಿ : ಪ್ರತಿ ವರ್ಷವೂ ಜನರಿಗೆ ಪ್ರವಾಹದ ಸಂಕಷ್ಟ ತಪ್ಪುತ್ತಿಲ್ಲ. ನದಿ ಪಾತ್ರದ ಜನ ವರ್ಷಕ್ಕೊಮ್ಮೆ ಮನೆ ತೊರೆದು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ಇದೆ. ಇನ್ನೂ ಅನೇಕ ರೈತರು ಕೈಗೆ ಬಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದರೆ ಇತ್ತ ಸಮಸ್ಯೆ ಆಲಿಸಬೇಕಾದ ಸಂಸದರ ಸುಳಿವೇ ಇಲ್ಲದಂತಾಗಿದೆ.
ಹೌದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮೇಲೆ ಜನ ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಆದರೆ ಈ ಇಬ್ಬರೂ ಸಂಸದರು ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸುವ ಪಯತ್ನ ಮಾಡದೆ, ಪ್ರವಾಹ ಪೀಡಿತ ಪ್ರದೇಶ ಮರೆತಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ.
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಕೃಷ್ಣಾ, ವೇದಗಂಗಾ, ದೂದಗಂಗಾ ನದಿ ಪ್ರವಾಹಕ್ಕೆ ಸಿಲುಕಿ ಸಾಕಷ್ಟು ಗ್ರಾಮಗಳ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷವೂ ಪ್ರವಾಹಕ್ಕೆ ಒಳಗಾಗುತ್ತಿರುವ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದು ಸೇರಿದಂತೆ ಸಂಕಷ್ಟದ ಸಂದರ್ಭದಲ್ಲಿ ಜನರ ಕಣ್ಣೀರು ಒರೆಸಲು ಸಂಸದರು ಇತ್ತ ಸುಳಿದಿಲ್ಲ ಎನ್ನುತ್ತಾರೆ ಜನ.
ಇನ್ನೂ ಬೆಳಗಾವಿ ಸಂಸದರು ಕಥೆ ವ್ಯತಿರಿಕ್ತವಾಗಿಲ್ಲ. ಇವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಘಟಪ್ರಭಾ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ನದಿ ಪಾತ್ರದ ಜನ ಹೈರಾಣಾಗಿದ್ದರೂ ಸಂಸದರಾದವರೂ ಅತ್ತ ಸುಳಿಯುವ ಪ್ರಯತ್ನ ಮಾಡಿಲ್ಲ. ಸೌಜನ್ಯಕ್ಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಜನರ ಸಂಕಷ್ಟ ಆಲಿಸುವ ಕೆಲಸ ಮಾಡದೆ ಕ್ಷೇತ್ರದ ಸಂಸದರಾಗಿ ಜವಾಬ್ದಾರಿ ಮರೆತಿದ್ದಾರೆ ಎಂಬುದು ಜನರ ಆರೋಪವಾಗಿದೆ.
ಬೆಳಗಾವಿ ಹಾಗೂ ಚಿಕ್ಕೋಡಿ ಸಂಸದರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಇದ್ದ ಸಂಸದರು ಪ್ರವಾಹ ಸೇರಿದಂತೆ ಜನ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾವತ್ತೂ ಕೈಬಿಟ್ಟಿಲ್ಲ. ಆದರೆ ಈಗಿನ ಸಂಸದರು ನಮ್ಮ ಸಂಕಷ್ಟ ಆಲಿಸುವಷ್ಟು ಸಮಯಾವಕಾಶ ನೀಡುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಕೇವಲ ವಿಮಾನ ಹಾಗೂ ರೈಲು ನಿಲ್ದಾಣ ಸೇವೆಗಳಿಗೆ ಪ್ರಾಶಸ್ತ್ಯ ನೀಡುವುದನ್ನು ಬಿಟ್ಟು ಪ್ರವಾಹ ಪೀಡಿತ ಜನರಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರದ ಕಣ್ಣು ತೆರೆಸುವ ಪ್ರಯತ್ನವನ್ನು ಸಂಸದರು ಮಾಡಬೇಕೆಂದು ಜನರ ಆಗ್ರಹವಾಗಿದಂತು ಸುಳ್ಳಲ್ಲ.
ಪ್ರವಾಹ ಸಂತ್ರಸ್ತರನ್ನೇ ಮರೆತರಾ ಸಂಸದರು…?



