ಶೆಟ್ಟರ್ ವಿರುದ್ಧ ಗುಡುಗಿದ ಸಚಿವೆ ಹೆಬ್ಬಾಳಕರ್ ; ಕಾರಣ ಏನು…?
ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುದಾನ ತಂದಿರುವ ಕ್ರೆಡಿಟ್ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರಿಗೆ ಸಲ್ಲಬೇಕು ಹೊರತು ಸಂಸದ ಜಗದೀಶ ಶೆಟ್ಟರ್ ಅವರಿಗಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಗರದ ಗೃಹ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಇವರು, ಜಗದೀಶ್ ಶೆಟ್ಟರ್ ಸಂಸದರಾಗಿ ಪತ್ರ ಕೊಟ್ಟ ತಕ್ಷಣ ಯಾರೂ ನೂರಾರು ಕೋಟಿ ಕೊಡುವುದಿಲ್ಲ. ಮುಖ್ಯಮಂತ್ರಿ ಆದವರಿಗೆ ಸಾಮಾನ್ಯ ಜ್ಞಾನ ಇರಬೇಕು. ತಾಕತ್ತಿದ್ದರೆ ಜಿಲ್ಲೆಯ ಬೇರೆ ದೇವಸ್ಥಾನಗಳಿಗೆ ಕೇಂದ್ರದಿಂದ ಅನುದಾನ ತರಲಿ. ಸಚಿವ ಹೆಚ್. ಕೆ ಪಾಟೀಲ ಅವರ ಪ್ರಯತ್ನದ ಫಲವಾಗಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಯಾಗುತ್ತಿದೆ ಎಂದರು.
ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸುವ ಯೋಜನೆಗೂ ತಮ್ಮ ಮೃಣಾಲ ಶುಗರ್ಸ್ ಗೂ ಯಾವುದೇ ಸಂಬಂಧವಿಲ್ಲ. ಬೆಳಗಾವಿಗೆ ಏನೇ ಕೆಟ್ಟದಾದರೂ ನನ್ನ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಹಿಡಕಲ್ ಜಲಾಶಯದಿಂದ ನೀರು ಯಾರು ಒಯ್ಯುತ್ತಿದ್ದಾರೆ? ಏಕೆ ಒಯ್ಯುತ್ತಿದ್ದಾರೆ? ನನಗೆ ಗೊತ್ತಿಲ್ಲ. ಇದಕ್ಕೆ ನಮ್ಮ ಹೆಸರನ್ನು ತಳುಕು ಹಾಕುವುದನ್ನು ಕೇಳಿ ನನಗೆ ಆಶ್ಚರ್ಯ ಮತ್ತು ಅನುಮಾನ ಹುಟ್ಟಿದೆ. ನಮ್ಮ ಶುಗರ್ ಫ್ಯಾಕ್ಟರಿಗೆ ಈ ನೀರು ಅಗತ್ವವೂ ಇಲ್ಲ, ಅದಕ್ಕೆ ಸಂಬಂಧವೂ ಇಲ್ಲ ಎಂದರು.
ಬೆಳಗಾವಿ ಜನರ ಭಾವನೆಗಳಿಗೆ ವಿರುದ್ಧವಾಗಿ ನಾನು ಯಾವತ್ತೂ ನಡೆದುಕೊಳ್ಳುವುದಿಲ್ಲ. ಹಿಡಕಲ್ ಜಲಾಶಯದ ನೀರನ್ನು ಧಾರವಾಡಕ್ಕೆ ಒಯ್ಯುವ ಯೋಜನೆ ಸಚಿವ ಸಂಪುಟದ ಮುಂದೆ ಬಂದಿಲ್ಲ. ಇದು ಯಾವ ಕಾಲದಲ್ಲಿ ಮಂಜೂರಾಗಿದೆ ಎನ್ನುವುದೂ ಗೊತ್ತಿಲ್ಲ. ನಾವಂತೂ ಒಪ್ಪಿಗೆ ಕೊಟ್ಟಿಲ್ಲ. ಈ ಬಗ್ಗೆ ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಯನ್ನೂ ಕೊಟ್ಟಿದ್ದಾರೆ. ನಾನೂ ಅವರೊಂದಿಗೆ ಚರ್ಚಿಸಿ, ಸೂಕ್ತವಾಗಿ ಸ್ಪಂದಿಸುತ್ತೇನೆ ಎಂದು ಹೆಬ್ಬಾಳಕರ್ ತಿಳಿಸಿದರು.
ಮಹದಾಯಿ ಯೋಜನೆ ವಿರುದ್ಧ ಪರಿಸರ ವಾದಿಗಳು ಈಗ ಹೋರಾಟ ನಡೆಸುತ್ತಿರುವ ಕುರಿತು ಪ್ರಶ್ನಿಸಿದಾಗ, ಬಹಳ ವರ್ಷಗಳ ಹೋರಾಟದ ಫಲವಾಗಿ ಮಹದಾಯಿ ಯೋಜನೆ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಇದಕ್ಕೆ ಪರಿಸರವಾದಿಗಳು ಅಡ್ಡಿಪಡಿಸಬಾರದು ಎಂದು ವಿನಂತಿಸುತ್ತೇನೆ ಎಂದರು.
ಗೃಹ ಲಕ್ಷ್ಮೀ ಯೋಜನೆಯ 19 ಕಂತು ಈಗಾಗಲೆ ಹಾಕಲಾಗಿದೆ. ಶೀಘ್ರವೇ 20ನೇ ಕಂತನ್ನೂ ಹಾಕುತ್ತೇವೆ. ಮಾರ್ಚ್ ತಿಂಗಳದ್ದು ಸ್ವಲ್ಪ ತಾಂತ್ರಿಕ ಸಮಸ್ಯೆಯಾಗಿದೆ, ಏಪ್ರಿಲ್ ಹಣ ಇಷ್ಟರಲ್ಲೇ ಜಮಾ ಆಗಲಿದೆ ಎಂದು ಸಚಿವರು ತಿಳಿಸಿದರು.
ಸಂಪುಟ ವಿಸ್ತರಣೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ. ಅವರು ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧಳಾಗಿ ನಡೆದುಕೊಳ್ಳುವವಳು, ಶಿಸ್ತು ಪಾಲಿಸುವವಳು. ಈ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದರು.


