ಕುಂದಾನಗರಿಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಣಕಹಳೆ ; ಕಾರ್ಯಕರ್ತರಲ್ಲಿ ಉತ್ಸಾಹ
ಬೆಳಗಾವಿ : ನಾಯಕತ್ವ ಗೊಂದಲ ಸೇರಿದಂತೆ ನಾನಾ ಕಾರಣಗಳಿಂದ ಒಡೆದ ಮನೆಯಂತಾಗಿದ್ದ ರಾಜ್ಯ ಬಿಜೆಪಿ ಪಾಳೆಯದಲ್ಲಿ ಸಧ್ಯ ಉತ್ಸಾಹ ಮನೆಮಾಡಿದೆ. ಕಾಂಗ್ರೆಸ್ ಸರಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ.
ರಾಜ್ಯ ಸರಕಾರದ ವಿರುದ್ಧ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ ಆರೋಪ ಹೊರಸಿ ಬಿಜೆಪಿ ಜನಾಕ್ರೋಶ ಯಾತ್ರೆ ಪ್ರಾರಂಬಿಸಿದ್ದು ಎರಡನೇ ಹಂತದ ಯಾತ್ರೆ ಬುಧವಾರ ಬೆಳಗಾವಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಜಿಲ್ಲಾ ನಾನಾ ಭಾಗಗಳಿಂದ ಬಿಜೆಪಿ ಕಾರ್ಯಕರ್ತರು ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ. ಹಿಂದೂಗಳಿಗೆ ಸರಕಾರಿ ಸೌಲಭ್ಯ ವಂಚಿಸಿ ಮುಸ್ಲಿಂ ಸಮುದಾಯಕ್ಕೆ ಮಾತ್ರ ನೀಡುತ್ತಿರುವ ಸರಕಾರಕ್ಕೆ ಜನ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ಹೊರಹಾಕಿದರು.
ಬುಧವಾರ ಬೆಳಗಾವಿ ನಗರದಲ್ಲಿ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆ ವೇದಿಕೆ ಸಮಾರಂಭ ಉದ್ದೇಶಿಸಿ ಮಾತನಾಡಿ. ಭ್ರಷ್ಟಾಚಾರಕ್ಕಾಗಿ ಹುಟ್ಟಿದ ಪಕ್ಷವೇ ಕಾಂಗ್ರೆಸ್, ದೇಶ ಹಾಗೂ ರಾಜ್ಯದಲ್ಲಿ ದಶಕಗಳ ಕಾಲ ಆಡಳಿತ ನಡೆಸಿರುವ ಇವರಿಗೆ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ.
ಮುಸ್ಲಿಂ ಓಲೈಸುವ ಕಾಂಗ್ರೆಸ್ ಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಆರ್ ಅಶೋಕ್ ಮಾತನಾಡಿ. ಜಾತಿ ಗಣತಿ ಸಮೀಕ್ಷೆಗೆ ಮನೆ ಮನೆಗೆ ಬಂದಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಮನೆ ಮನೆಗೆ ಹೋಗದೇ ಸಮೀಕ್ಷೆ ಮಾಡಿರುವುದು ಸಿದ್ದರಾಮಯ್ಯನವರ ತಂತ್ರ. ಸಮೀಕ್ಷೆ ಮಾಡದೇ ಅದಕ್ಕೆ ಮೀಸಲಿಟ್ಟ 165 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು ಎಂದರು.
ಜಾತಿಗಣತಿ ಮಾಡದೇ ಸಿಎಂ ಸಿದ್ದರಾಮಯ್ಯ 165 ಕೋಟಿ ರೂ. ಹಣ ಹೊಡೆದಿದ್ದಾರೆ. ಸಿದ್ದರಾಮಯ್ಯ ಧರ್ಮ, ಜಾತಿ ಒಡೆಯುವ ಕೆಲಸದಲ್ಲಿ ಮುಂದಿದ್ದಾರೆ. ಈ ಹಿಂದೆ ಲಿಂಗಾಯತ ಧರ್ಮ ಒಡೆಯಲು ಹೋಗಿ ಕಪಾಳ ಮೋಕ್ಷ ತಿಂದಿದ್ದಾರೆ. ಈಗ ಜಾತಿ ಗಣತಿ ವರದಿ ತೋರಿಸಿ ಹಿಂದೂಗಳನ್ನು ಒಡೆಯುತ್ತಿದ್ದಾರೆ. ಮುಸ್ಲಿಂ ಧರ್ಮದಲ್ಲೂ 10 ಜಾತಿಗಳಿವೆ, ಒಂದೂ ಪ್ರತ್ಯೇಕಿಸಿಲ್ಲ. ಆದರೆ ಹಿಂದೂಗಳನ್ನು ತುಂಡರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಚೆಲುವಾದ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಯದುವೀರ್ ಒಡೆಯರ್, ಜಗದೀಶ್ ಶೆಟ್ಟರ್, ಶಾಸಕರಾದ ಅಭಯ್ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ, ಮಾಜಿ ಶಾಸಕ ಅನಿಲ್ ಬೆನಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


