ಸಿಎಂ ಚಿನ್ನದ ಪದಕ ಪಡೆದ ಇನ್ಸ್‌ಪೆಕ್ಟರ್ ವಿರುದ್ಧ ಚಿನ್ನ ಕದ್ದ ಆರೋಪ
ಮಂಗಳೂರು : ಮುಖ್ಯಮಂತ್ರಿ ಚಿನ್ನದ ಪದಕ (CM Gold Medal) ಪಡೆದ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಆರೋಪಿಯ ಮೈಮೇಲಿದ್ದ 50 ಗ್ರಾಮ್ ಚಿನ್ನ ಎಗರಿಸಿದ ಆರೋಪ ಬಂದಿದೆ.
ಉಳ್ಳಾಲ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿದ ಪೊಲೀಸರ ತಂಡದಲ್ಲಿದ್ದ ಬಾಲಕೃಷ್ಣ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ (Mangaluru News). ಇದೇ ವೇಳೆ ಕಳವು ಪ್ರಕರಣಕ್ಕೆ ಸಂಬಂಧಿಸಿ 50 ಗ್ರಾಮ್ ಚಿನ್ನಾಭರಣವನ್ನು ಜಫ್ತಿ ಮಾಡುವ ವೇಳೆ ಇನ್ಸ್‌ಪೆಕ್ಟರ್ ಎಗರಿಸಿದ್ದಾರೆ ಎಂದು ಎಸಿಪಿಗೆ ದೂರು ನೀಡಿದ ನಂತರ ವಿಚಾರ ಬಯಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಿಂದ ಭಾನಗಡಿ ಮಾಡಿ ಕಡ್ಡಾಯ ರಜೆಯಲ್ಲಿ ಮನೆಗೆ ಹೋಗಿದ್ದ ಬಾಲಕೃಷ್ಣ ನಾಯಕ್ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷದಿಂದ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ಇನ್ಸ್‌ಪೆಕ್ಟರ್ ಆಗಿ ಆಗಮಿಸಿದ್ದಾರೆ.
2024ರ ಜೂ. 28ರಂದು ಉಳ್ಳಾಲದಲ್ಲಿ ವೃದ್ಧರೊಬ್ಬರು ತನ್ನ ಮನೆಯಿಂದ 15 ಲಕ್ಷ ರೂ. ಬೆಲೆಯ 32 ಪವನ್ ಚಿನ್ನಾಭರಣ ಕಳವಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೊಂಡಿದ್ದ ಇನ್ಸ್‌ಪೆಕ್ಟರ್ ಬಾಲಕೃಷ್ಣ ದೂರು ನೀಡಿದ ವ್ಯಕ್ತಿಯ ಮಗ ಪಿಯುಸಿ ವಿದ್ಯಾರ್ಥಿ ಸಹಿತ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ವಯಸ್ಕ ಗೆಳೆಯರು ಸೇರಿ ಕಳವು ಕೃತ್ಯ ನಡೆಸಿರುವುದಾಗಿ ಆರೋಪ ಪಟ್ಟಿ ಸಲ್ಲಿಸಿದ್ದರು.


