ಅಕ್ರಮಗಳ ವಿರುದ್ಧ ವಿಜಯಪುರ ಎಸ್ಪಿ ಸಮರ ; 10 ಕಂಟ್ರಿ ಪಿಸ್ತೂಲ್ ವಶ
ವಿಜಯಪುರ : ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಬಳಸಲಾಗುತ್ತಿದ್ದ ಅಕ್ರಮ ನಾಡಾ ಪಿಸ್ತೂಲ್ ಗಳ ಜಾಡು ಹಿಡಿಯಲು ವಿಜಯಪುರ ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಜಿಲ್ಲಾದ್ಯಂತ ಅಕ್ರಮವಾಗಿ ಪಿಸ್ತೂಲ್ ಪಡೆದ ಒಟ್ಟು 10 ಆರೋಪಿಗಳನ್ನು ಬಂಧಿಸಿ ಅವರಿಂದ 10 ಕಂಟ್ರಿ ಪಿಸ್ತೂಲ್ ಹಾಗೂ 24 ಸಜೀವ ಗುಂಡಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಪೊಲೀಸ್ ಸಮುದಾಯ ಭವನದಲ್ಲಿ ಮಂಗಳವಾರ ಈ ಕುರಿತು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕಳೆದ ಜ.28 ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಅರಕೇರಿ ತಾಂಡಾ 1 ರಲ್ಲಿ ಸತೀಶ ರಾಠೋಡ ಕೊಲೆ ಪ್ರಕರಣ ನಡೆದಿತ್ತು. ಇದೇ ಗ್ರಾಮದ ರಮೇಶ ಲಮಾಣಿ ಎಂಬಾತನ ಮಗಳನ್ನು ಮದುವೆ ಮಾಡಿಕೊಡುವಂತೆ ಸತೀಶ ರಾಠೋಡ ರಮೇಶ ಲಮಾಣಿಯನ್ನು ಕೇಳಿದ್ದಾಗ ಆತ ನಿರಾಕರಿಸಿದ್ದ. ಇದೇ ಕಾರಣಕ್ಕೆ ಆತನ ಮಗಳು ಭಾವಿಗೆ ಹಾರಿ ಮೃತಳಾಗಿದ್ದಳು. ಮಗಳ ಸಾವಿಗೆ ಸತೀಶನೇ ಕಾರಣವೆಂದು ತಂದೆ ರಮೇಶ ಲಮಾಣಿ ಸತೀಶ ರಾಠೋಡನನ್ನು ಪಿಸ್ತೂಲ್ ನಿಂದ ಗುಂಡು ಹಾರಿಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಈ ಸಂಬಂಧ 6 ಜನರನ್ನು ಬಂಧಿಸಲಾಗಿತ್ತು.
ಸತೀಶ ರಾಠೋಡ ಕೊಲೆ ಮಾಡಲು ಪ್ರಕರಣದ 5 ನೇ ಆರೋಪಿಯಾಗಿರುವ ಸಾಗರ ಅಲಿಯಾಸ್ ಸುರೇಶ ರಾಠೋಡ ಎಂಬಾತ ರಮೇಶ ಲಮಾಣಿಗೆ ಅಕ್ರಮ ಪಿಸ್ತೂಲ್ ಪೂರೈಸಿದ್ದ, ಆರೋಪಿ ಸಾಗರ ಪೊಲೀಸ್ ವಿಚಾರಣೆ ವೇಳೆ ಜಿಲ್ಲೆಯಲ್ಲಿ ಹಲವಾರು ಜನರಿಗೆ ಅಕ್ರಮ ಪಿಸ್ತೂಲ್ ಪೂರೈಸಿರುವುದಾಗಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸುರೇಶನಿಂದ ಅಕ್ರಮವಾಗಿ ಪಿಸ್ತೂಲ್ ಪಡೆದವರ ಮೇಲೆ ದಾಳಿ ನಡೆಸಿ, ಒಟ್ಟು 10 ಕಂಟ್ರಿ ಪಿಸ್ತೂಲ್, 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಅಕ್ರಮ ಪಿಸ್ತೂಲ್ ನೀಡಿದ್ದ ಸಾಗರ ರಾಠೋಡ ಸೇರಿ ಈತನಿಂದ ಅಕ್ರಮ ಪಿಸ್ತೂಲ್ ಪಡೆದಿದ್ದ ವಿಜಯಪುರ ಹಂಚಿನಾಳ ತಾಂಡಾದ ಪ್ರಕಾಶ ರಾಠೋಡ, ಕರಾಡದೊಡ್ಡಿಯ ಅಶೋಕ ಪಾಂಡ್ರೆ, ತುಳಜಾಪುರದ ಸುಜಿತ ರಾಠೋಡ, ವಿಜಯಪುರ ನಗರ ಸಾಯಿ ಪಾರ್ಕ್ ನ ಸುಖದೇವ ರಾಠೋಡ, ಸಿಂದಗಿ ನಾಗಾವಿ ತಾಂಡಾದ ಪ್ರಕಾಶ ರಾಠೋಡ, ಬಸನವ ಬಾಗೇವಾಡಿಯ ಗಣೇಶ ಶೆಟ್ಟಿ, ಹುಬ್ಬಳ್ಳಿಯ ಚನ್ನಪ್ಪ ನಾಗನೂರ, ತಿಕೋಟಾ ಲೋಹಗಾಂವ ತಾಂಡಾದ ಸಂತೋಷ ರಾಠೋಡ ಹಾಗೂ ಸಾಂಗ್ಲಿಯ ಜನಾರ್ಧನ ಪವಾರನನ್ನು ವಿಜಯಪುರ ಪೊಲೀಸರು ಬಂಧಿಸಿ, ಪಿಸ್ತೂಲ್, ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಪಿಸ್ತೂಲ್ ಪೂರೈಸುತ್ತಿದ್ದ ಸಾಗರ ಅಲಿಯಾಸ್ ಸುರೇಶ ರಾಠೋಡ ಈ ಹಿಂದೆ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೇಳೆ ಐದಾರೂ ವರ್ಷಗಳಿಂದ ಮಧ್ಯಪ್ರದೇಶದ ವ್ಯಕ್ತಿಯೊಬ್ಬನೊಂದಿಗೆ ಸಂಪರ್ಕ ಹೊಂದಿ ಆತನಿಂದ ಅಕ್ರಮವಾಗಿ ಪಿಸ್ತೂಲ್ ಗಳನ್ನು ಖರೀಧಿಸಿ ಇತರರಿಗೆ ಸುಮಾರು 50 ಸಾವಿರದಿಂದ ಒಂದು ಲಕ್ಷ ಹಣಕ್ಕೆ ಪಿಸ್ತೂಲ್ ಮಾರುತ್ತಿದ್ದನು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ವಿಜಯಪುರ ಅಡಿಷನಲ್ ಎಸ್ಪಿಗಳಾದ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಅಕ್ರಮ ಪಿಸ್ತೂಲ್ ಜಾಲ ಹಿಡಿಯುವ ಯಶಸ್ವಿ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಡಿಎಸ್ಪಿ ಗಿರಿಮಲ್ಲ ತಳಕಟ್ಟಿ, ಬಸವರಾಜ ಯಲಿಗಾರ, ಹೆಚ್.ಎಸ್.ಜಗದೀಶ, ಬಲ್ಲಪ್ಪ ನಂದಗಾವಿ, ಪೊಲೀಸ್ ಇನಸ್ಪೆಕ್ಟರ್ ಗಳಾದ ರಾಯಗೊಂಡ ಜಾನರ, ಮಲ್ಲಯ್ಯ ಮಠಪತಿ.
ನಾನಾಗೌಡ ಪಾಟೀಲ, ಗುರುಶಾಂತ ದಾಶ್ಯಾಳ, ಪರಶುರಾಮ ಮನಗೂಳಿ, ಪಿಎಸ್ಐಗಳಾದ ವಿನೋದ ದೊಡ್ಡಮನಿ, ಎಸ್.ಎ.ಉಪ್ಪಾರ, ಶ್ರೀಕಾಂತ್ ಕಾಂಬಳೆ, ಆರೀಫ್ ಮುಶಾಪುರಿ, ದೇವರಾಜ ಉಳ್ಳಾಗಡ್ಡಿ, ಸೀತಾರಾಮ ಲಮಾಣಿ, ಡಿ.ಎಂ. ಸಂಗಾಪುರ, ಬಿ.ಎ.ತಿಪ್ಪರೆಡ್ಡಿ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಶಂಸನಾ ಪತ್ರ ನೀಡಿ ಶ್ಲಾಘೀಸಿದರು.


