ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣ ; ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ
ಬೆಳಗಾವಿ : ಸದನದಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಹೊಸದಲ್ಲ, ಇಂತಹ ವಿಷಯವನ್ನು ಮುಂದುವರಿಸುವುದಕ್ಕಿಂದ ಬಿಟ್ಟುಬಿಡುವುದು ಒಳ್ಳೆಯದು. ಈಗಾಗಲೇ ಸಿ.ಟಿ ರವಿ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದು ಇಲ್ಲಿಗೆ ವಿಷಯ ಮುಗಿಸಿದರು ಒಳಿತು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶನಿವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಘೊಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಈ ಹಿಂದೆಯೂ ಸದನದಲ್ಲಿ ನಾಲಿಗೆ ಹರಿಬಿಟ್ಟ ಅನೇಕ ಘಟನೆಗಳು ನಡೆದಿವೆ. ಇವುಗಳನ್ನು ಮುಂದುವರಿಸುವುದು ಸರಿಯಲ್ಲ. ಕಹಿ ಘಟನೆ ನಡೆದಿದೆ, ಇದನ್ನು ಇಲ್ಲಿಗೆ ಬಿಟ್ಟುಬಿಡಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಸಿ.ಟಿ ರವಿ ಅಶ್ಲೀಲ ಪದ ಬಳಕೆ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸರು ತಮ್ಮ ವಿವೇಚನೆಯಿಂದ ಕೆಲಸ ಮಾಡಿದ್ದಾರೆ. ಸಿ.ಟಿ ರವಿ ಅವರನ್ನು ದುರುದ್ಧೇಶದಿಂದ ರಾತ್ರಿಯಿಡೀ ಸುತ್ತಿಸಿಲ್ಲ. ಅವರು ಇದ್ದ ಠಾಣೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರು ಬೇಟಿನೀಡುತ್ತಿದ್ದ ಹಿನ್ನಲೆಯಲ್ಲಿ ಭದ್ರತೆ ದೃಷ್ಟಿಯಿಂದ ಅವರನ್ನು ಬೇರೆಡೆಗೆ ಸ್ಥಳಾಂತರಿಸಿದ್ದು ಬೇರೆ ಯಾವ ಉದ್ದೇಶ ಇಲ್ಲ ಎಂದರು.
ಬೆಳಗಾವಿ ಪೊಲೀಸರಿಗೆ ಸಿ.ಟಿ ರವಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಒತ್ತಡ ಹಾಕಿದ್ದಾರೆ ಎಂಬ ವಿಚಾರವಾಗಿ ಮಾತನಾಡಿ. ಅವರು ಯಾರು ಒತ್ತಡ ಹಾಕಿದ್ದಾರೆ ಎಂಬ ವಿಚಾರವನ್ನು ಬಿಜೆಪಿ ನಾಯಕರೇ ಸ್ಪಷ್ಟಪಡಿಸಲಿ. ನಾವು ರಾತ್ರಿ ಠಾಣೆಗೆ ಹಾಜರುಪಡಿಸಿ ಎಂದು ಹೇಳಿದ್ದು ಮಾತ್ರ ಎಂದು ಸ್ಪಷ್ಟಪಡಿಸಿದರು.
ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಸಿದ್ಧತೆ ಕುರಿತು ಮಾತನಾಡಿ. ಗಾಂಧಿ ಭಾರತ ಕಾರ್ಯಕ್ರಮಕ್ಕೆ ದೇಶದಾದ್ಯಂತ 400 ಮುಖಂಡರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಸಂಸದರು ಶಾಸಕರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಈ ಕುರಿತು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಧಿವೇಶನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ದೇಶದಲ್ಲಿ ಹೊಸ ಸಂದೇಶ ನೀಡಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


