ಸಿಎಂ ಸಿದ್ದರಾಮಯ್ಯ ಕೋಪಕ್ಕೆ ಅಲ್ಲಿದ್ದವವರು ತಬ್ಬಿಬ್ಬು
ಮೈಸೂರು : ಮಾಧ್ಯಮಗಳ ಜೊತೆ ಮಾತನಾಡುವಾಗ ಗದ್ದಲ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಸಿಎಂ ಸಿದ್ದರಾಮಯ್ಯ ಹೊಡೆಯಲು ಮುಂದಾದ ಪ್ರಸಂಗ ಇಂದು ನಡೆದಿದೆ.
ಸಿಎಂ ಸಿದ್ದರಾಮಯ್ಯ ಬುಧವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಸುತ್ತಲು ನಿಂತಿದ್ದ ನಾಯಕರು,
ಕಾರ್ಯಕರ್ತರು ಮಾತನಾಡಿ ಗದ್ದಲ ಮಾಡುತ್ತಿದ್ದರು.
ಕಾರ್ಯಕರ್ತ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಗರಂ ಆದ ಸಿದ್ದರಾಮಯ್ಯ ಜೋರು ಧ್ವನಿಯಲ್ಲಿ ಗದರಿ, ನಾಲಗೆ ಕಚ್ಚಿ ಕೈ ಎತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು. ಬಿಜೆಪಿಯವರ ಮೇಲೆ ಅನೇಕ ಆರೋಪಗಳಿವೆ. ಕರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ ಆಯೋಗ ವರದಿ ಸಲ್ಲಿಸಿದ್ದು, 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ ನ್ನು 2140
ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಏನು ಹೇಳುತ್ತಾರೆ? ಭ್ರಷ್ಟಾಚಾರ ಮಾ ಡಿರುವುದು ಅವರ ಸರ್ಕಾರ ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ.ಭ್ರಷ್ಟಾಚಾರ ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನರೇಂದ್ರ ಮೋದಿ ಅವರು ಅಬಕಾರಿ ಇಲಾಖೆಯಲ್ಲಿ 700 ಕೋಟಿ ವಸೂಲಿ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ಅವರು ಪ್ರಧಾನ ಮಂತ್ರಿ ಸ್ಥಾನ ನೀಡಲು ಸಿದ್ಧರಿದ್ದಾರೆಯೇ ? ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದರು.
ಇಂದು ಮತದಾನ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲಿ ಜನಸ್ಪಂದನೆ ನೋಡಿದರೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಬಂಡೀಪುರದಲ್ಲಿ ರಾತ್ರಿ ಸಂಚಾರ ಪುನ: ಪ್ರಾರಂಭಿಸುವ ಬಗ್ಗೆ ಚರ್ಚೆಯಾಗಿಲ್ಲ. ಸರ್ಕಾರದ ಮುಂದೆ ಈ ಕುರಿತ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.


