ಕೆಪಿಎಸ್ಸಿ ವಿರುದ್ಧ ಸಿಡಿದೆದ್ದ ಯುವ ಸಮೂಹ ; ಮರು ಪರೀಕ್ಷೆಗೆ ಸಿಎಂ ಆದೇಶ
ಬೆಳಗಾವಿ : ಕೆಎಎಸ್ ಮರುಪರೀಕ್ಷೆ ನಡೆಸುವಂತೆ ಆಗ್ರಹಿಸಿ ಬೆಳಗಾವಿ ಗಡಿನಾಡ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳು ಸೋಮವಾರ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಭಾರತದ ನದಿ ವ್ಯವಸ್ಥೆ ಎಂದು ಕೊಡಬೇಕಾದ ಕಡೆ “ಚರಂಡಿ ವ್ಯವಸ್ಥೆ” ಎಂದೂ, ಭಾರವಾದ ಎಂಬುದರ ಬದಲಿಗೆ ಅತಿ ವೇಗವಾದ ಎಂದೂ, ಸಿಸ್ಟರ್ ಎಂಬುದಕ್ಕೆ ಸಹೋದರ ಎಂದೂ, ರಾಜ್ಯ ವಿಧಾನಸಭೆ ಎಂಬುದರ ಬದಲಿಗೆ ರಾಜ್ಯಸಭೆ ಎಂದೂ, ಕಲೆ ಎಂದು ಕೊಡುವ ಬದಲಿಗೆ ವಸ್ತು ಎಂದೂ,
ಬೇರಿನಾಕಾರದ ಎಂದು ಕೊಡುವ ಬದಲಿಗೆ ಸಸ್ಯಾಂಕಿತ ಎಂದೂ, ತಪ್ಪಾದ ಇಲ್ಲವೇ ಸರಿಯಲ್ಲದ ಎಂದು ಕೊಡುವ ಕಡೆ ಸರಿಯಾದ ಎಂದೂ ವಿತ್ತೀಯ ಇಲ್ಲವೇ ಹಣಕಾಸು ಎಂದು ಕೊಡಬೇಕಾದ ಕಡೆ ಆರ್ಥಿಕ ಎಂದೂ ಕೆಎಎಸ್ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಕೊಡುವುದು ಕೇವಲ ಭಾಷಾಂತರದ ಸಮಸ್ಯೆ ಎನಿಸುವುದಿಲ್ಲ.
ಒಂದು ಪ್ರಶ್ನೆ ಪತ್ರಿಕೆ ತಯಾರು ಮಾಡಲು ಬೇಕಾದ ಕನಿಷ್ಟ ಮಟ್ಟದ ತಿಳುವಳಿಕೆಯಾಗಲೀ, ಸೂಕ್ತ ತರಬೇತಿಯಾಗಲೀ, ಸೂಕ್ತ ಮಾನದಂಡವಾಗಲೀ ಕೆಪಿಎಸ್ಸಿ ಹೊಂದಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ. ಸರಕಾರ ಕೂಡಲೇ ಕೆಎಎಸ್ ಮರು ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾರುತಿ ಅಷ್ಟಗಿ, ಗಿರೀಶ್ ಬಡಿಗೇರ, ನಾಗರಾಜ ಗಸ್ತಿ, ಎನ್.ರಾಯಬಾಗಿ, ಪಿ.ಸಲೋಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆಎಎಸ್ ಮರು ಪರೀಕ್ಷೆ ನಡೆಸಬೇಕು ಎಂಬ ಹೋರಾಟ ಹೆಚ್ಚಾದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 27 ರಂದು ನಡೆದಿದ್ದ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ವ್ಯಾಕರಣ ದೋಷ ಹಾಗೂ ಅಸಂಬದ್ಧ ಪ್ರಶ್ನೆಗಳ ಕುರಿತು ಪರೀಕ್ಷಾರ್ಥಿಗಳು ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಕಾರಣಕ್ಕೆ ಸಿಎಂ ಮರು ಪರೀಕ್ಷೆಗೆ ಆದೇಶ ಹೊರಡಿಸಿದ್ದಾರೆ.


