ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನ ಪಲ್ಟಿ ; ಮೂರು ಕರು ಸಾವು
ಬೈಲಹೊಂಗಲ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಪಲ್ಟಿಯಾದ ಪರಿಣಾಮ 3 ಕರುಗಳು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.
ಮಹಾರಾಷ್ಟ್ರ ನೋಂದಣಿ ಹೊಂದಿದ ಕ್ಯಾಂಟರ್ ನಲ್ಲಿ ಸುಮಾರು 12 ಗೋವುಗಳನ್ನು ತುಂಬಿಕೊಂಡು ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ 3 ಕರುಗಳು ಸಾವನ್ನಪ್ಪಿದ್ದು, ಎರಡು ಹಸುಗಳ ಸ್ಥಿತಿ ಗಂಭೀರವಾಗಿವೆ. ಏಳು ಹಸುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕ್ಯಾಂಟರನಲ್ಲಿ ಸಿಲುಕಿದ್ದ ಹಸುಗಳನ್ನು ಹೊರ ತೆಗೆದರು. ಬದುಕುಳಿದ 9 ಗೋವುಗಳನ್ನು ವಶಕ್ಕೆ ಪಡೆದು ಇಂಚಲದ ಗೋಶಾಲೆಗೆ ಸಾಗಿಸಿದರು.
ಸ್ಥಳಕ್ಕೆ ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್ಐ ಗುರುರಾಜ ಕಲಬುರ್ಗಿ, ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ನಡೆಸಿದರು.
ಹಿಂದೂಪರ ಸಂಘಟನೆ ಪ್ರಮುಖ ಕುಮಾರ ಗಣಾಚಾರಿ, ಈರಯ್ಯಾ ಚಿಕ್ಕಮಠ, ಅಭಿಷೇಕ ಬೆನಕಟ್ಟಿ, ನಾಗಪ್ಪ ಸಂಗೊಳ್ಳಿ, ಶಿವು ತಿಗಡಿ, ಮಂಜುನಾಥ ಕರಿಗಾರ ನೇತೃತ್ವದಲ್ಲಿ ಹಲವಾರು ಯುವಕರು ಗೋ ಸೇವೆ ಮಾಡಿದರು. ಮೃತ ಗೋವುಗಳ ಪೂಜೆ ಮಾಡಿ ವಿದಿ, ವಿಧಾನಗಳಿಂದ ಅಂತ್ಯ ಸಂಸ್ಕಾರ ನೆರವೇರಿಸಿದರು. ಶ್ರೀರಾಮಸೇನೆ ಹಿಂದೂಸ್ತಾನ ಮುಖ್ಯಸ್ಥ ರಮಾಕಾಂತ ಕುಂಡಸ್ಕರ ಭೇಟಿ ನೀಡಿದರು.


