ವಿರೋಧಿಗಳ ಕುತಂತ್ರವಿದ್ದರೂ ಜನ ನಮ್ಮ ಕೈ ಬಿಟ್ಟಿಲ್ಲ : ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಅಪೆಕ್ಸ್ ಬ್ಯಾಂಕಿನಿಂದ ನಾಮ ನಿರ್ದೇಶನ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲುಮತ ಸಮಾಜಕ್ಕೆ ಭರವಸೆ ನೀಡಿದರು.
ಗುರುವಾರ ಎನ್‌ಎಸ್‌ಎಫ್ ಕಾರ್ಯಾಲಯದಲ್ಲಿ ಅರಭಾವಿ ಕ್ಷೇತ್ರದ ಹಾಲು ಮತ ಸಮಾಜ ಬಾಂಧವರು ನೀಡಿರುವ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ಹಾಲುಮತ ಸಮಾಜಕ್ಕೆ ಸಿಗಬೇಕಿರುವ ಪ್ರಾಶಸ್ತ್ಯವನ್ನು ನೀಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ದೇವರು ಮತ್ತು ಜಿಲ್ಲೆಯ ಸಹಕಾರಿ ಮತದಾರರ ಆಶೀರ್ವಾದದಿಂದ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ನಮ್ಮ ಪೆನೆಲ್ ಅಧಿಕಾರಕ್ಕೆ ಬಂದಿದೆ. ವಿರೋಧಿಗಳು ಎಷ್ಟೋ ಕುತಂತ್ರಗಳನ್ನು ಮಾಡಿದ್ದರೂ ಜನರು ತಮ್ಮ ಕೈ ಬಿಡಲಿಲ್ಲ. ಅದಕ್ಕಾಗಿ ಎಲ್ಲ ಸಮಾಜದ ಬಾಂಧವರಿಗೆ ಋಣಿಯಾಗಿರುವುದಾಗಿ ಅವರು ಹೇಳಿದರು.
ಜಿಲ್ಲೆಯಲ್ಲಿಯೇ ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಈ ಚುನಾವಣೆಯಲ್ಲಿ ನಮ್ಮ ಫೆನೆಲ್ ಸಂಪೂರ್ಣ ಬಹುಮತ ಸಾಧಿಸಿದೆ. ಬರುವ ನವೆಂಬರ್ ತಿಂಗಳಲ್ಲಿ ಬ್ಯಾಂಕಿಗೆ ಹೊಸ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಅಧ್ಯಕ್ಷ ಸ್ಥಾನವು ಲಿಂಗಾಯತ ಸಮಾಜಕ್ಕೆ ನೀಡಲು ಈಗಾಗಲೇ ತೀರ್ಮಾಣ ಕೈಕೊಳ್ಳಲಾಗಿದೆ.
ಅಪೆಕ್ಸ್ ಬ್ಯಾಂಕಿನಿಂದ ಹಾಲುಮತ ಕುರುಬ ಸಮಾಜದವರೊಬ್ಬರನ್ನು ನಮ್ಮ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ನಾಮ ನಿರ್ದೇಶನ ಮಾಡಿಕೊಳ್ಳಲಾಗುವುದು. ನಮ್ಮ ರಾಜಕೀಯ ಬೆಳವಣಿಗೆಯಲ್ಲಿ ಈ ಸಮಾಜದ ಪಾತ್ರ ಬಹುಮುಖ್ಯ ಆಗಿದೆ ಎಂದು ಅವರು ತಿಳಿಸಿದರು.
ಬಾಲಚಂದ್ರ ಶಾಸಕ ಜಾರಕಿಹೊಳಿಯವರನ್ನು ಸಮಾಜ ಬಾಂಧವರು ಕಂಬಳಿ ತೊಡಿಸಿ, ಫಲ- ಪುಷ್ಪ ನೀಡಿ ಹೂಹಾರ ಹಾಕಿ ಸತ್ಕರಿಸಿದರು. ವೇದಿಕೆಯಲ್ಲಿ ಪ್ರದೇಶ ಕುರುಬರ ಸಂಘದ ನಿರ್ದೇಶಕ ರಾಜೇಂದ್ರ ಸಣ್ಣಕ್ಕಿ, ಪ್ರಭಾ ಶುಗರ್ಸ್ ಅದ್ಯಕ್ಷ ಶಿದಲಿಂಗ ಕಂಬಳಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಲಕ್ಷ್ಮಣ ಗಣಪ್ಪಗೋಳ, ಭೀಮಶಿ ಮಗದುಮ್ಮ, ರಂಗಪ್ಪ ಇಟ್ಟನ್ನವರ, ಲಕ್ಷ್ಮಣ ಮುಸಗುಪ್ಪಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


