ಬೆಂಗಳೂರು : ಹಾಸನ ಜೆಡಿಎಸ್‌ ಸಂಸದ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ತನಿಖೆಗೆ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿಜಯ್ ಕುಮಾರ್‌ ಸಿಂಗ್‌ (ಬಿ.ಕೆ. ಸಿಂಗ್‌) ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿಯನ್ನು ಮುನ್ನಡೆಸಿದ್ದ ಬಿ.ಕೆ. ಸಿಂಗ್‌ ಅವರಿಗೆ ವಿಶೇಷ ತನಿಖಾ ದಳದ ನೇತೃತ್ವ ವಹಿಸಿದ್ದು, ಸಹಾಯಕ ಪೊಲೀಸ್‌ ಮಹಾ ನಿರೀಕ್ಷಕರಾದ ಸುಮನ್‌ ಡಿ. ಪೆನ್ನೇಕರ್‌ ಹಾಗೂ ಮೈಸೂರು ಪೊಲೀಸ್‌ ಅಧೀಕ್ಷಕರಾದ ಸೀಮಾ ಲಾಠ್ಕರ್‌ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಸೀಮಾ ಲಾಠ್ಕರ್ ಅವರು ಈ ಹಿಂದೆ ಬೆಳಗಾವಿ ನಗರ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದರು.

ಭಾನುವಾರ ಈ ಕುರಿತು ಆದೇಶ ಹೊರಡಿಸಿರುವ ಒಳಾಡಳಿತ ಇಲಾಖೆಯು, ಮಹಿಳೆಯೊಬ್ಬರ ದೂರಿನ ಮೇರೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್‌ ಪೊಲೀಸ್‌ ಠಾಣೆಯಲ್ಲಿ ಏ.28ರಂದು ಭಾನುವಾರ ಕಲಂ 345ಎ, 354ಡಿ, 506, 509 ಐಪಿಸಿ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ತಾಂತ್ರಿಕ ಪರಿಣತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡ ರಚಿಸುವುದು ಸೂಕ್ತ ಎಂದು ಸರ್ಕಾರ ತೀರ್ಮಾನಿಸಿ ಈ ಆದೇಶ ಹೊರಡಿಸಿದೆ ಎಂದು ತಿಳಿಸಲಾಗಿದೆ.