ಬೆಳಗಾವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ
ಬೆಳಗಾವಿ : ಬೆಳಗಾವಿ ಹಾಲು ಒಕ್ಕೂಟದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ದುಡಿಯೋಣ. ಪಕ್ಷಾತೀತವಾಗಿ ಕೆಲಸವನ್ನು ಮಾಡೋಣ. ಜಿಲ್ಲಾ ಹಾಲು ಒಕ್ಕೂಟಕ್ಕೆ ರೈತರ ಸಹಕಾರ ಅಗತ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಇಲ್ಲಿಯ ಜಿಲ್ಲಾ ಹಾಲು ಒಕ್ಕೂಟದ ಸಭಾಗೃಹದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು. ಹಿಂದಿನ ಅಧ್ಯಕ್ಷ ವಿವೇಕರಾವ ಪಾಟೀಲ ಮತ್ತು ಒಕ್ಕೂಟದ ಸದಸ್ಯರು ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಒಕ್ಕೂಟದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಸರಕಾರವು ಸಹಕಾರಿ ಇಲಾಖೆಯಲ್ಲಿ ತಿದ್ದುಪಡಿಯನ್ನು ತರಲು ಉತ್ಸುಕವಾಗಿದೆ. ಈಗಾಗಲೇ ರಾಜ್ಯ ಮಟ್ಟದ ಸಹಕಾರಿ ಮಹಾಮಂಡಳಿಗೆ ಹೋಗಬಯಸುವವರು ಮೊದಲಿಗೆ ಜಿಲ್ಲಾ ಒಕ್ಕೂಟಕ್ಕೆ ಅಧ್ಯಕ್ಷರಾಗಬೇಕು. ಅಧ್ಯಕ್ಷರಾದವರು ಮಹಾಮಂಡಳಿಗೆ ನಿರ್ದೇಶಕರಾಗಬೇಕೆನ್ನುವ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಹೊಸ ಕಾಯ್ದೆಯು ವಿಧಾನ ಪರಿಷತ್ತಿನಲ್ಲಿ ಸೋಲಾಗಿದ್ದು, ವಿಧಾನ ಸಭೆಯಲ್ಲಿ ಅಂಗೀಕಾರವಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಸಹಕಾರಿ ಇಲಾಖೆಯ ಹೊಸ ನಿಯಮ ಜಾರಿಯಾಗುವುದರಿಂದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಅಧ್ಯಕ್ಷರಾಗಬೇಕಾಯಿತು ಎಂದು ಅಧ್ಯಕ್ಷ ಸ್ಥಾನದ ಗುಟ್ಟನ್ನು ಬಾಲಚಂದ್ರ ಜಾರಕಿಹೊಳಿ ಅವರು ಬಹಿರಂಗ ಪಡಿಸಿದರು.
ಹಿಂದಿನ ಅವಧಿಯ ಅಧ್ಯಕ್ಷರಾಗಿ ವಿವೇಕರಾವ್ ಪಾಟೀಲ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಕಹಾಮ ಆಡಳಿತ ಮಂಡಳಿಯ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿಯಬೇಕಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಾಯಿತು. ಮುಂದಿನ ದಿನಗಳಲ್ಲಿ ಯಾವುದೇ
ಗೊಂದಲಗಳು ನಡೆಯಬಾರದು. ಈ ಹಿನ್ನೆಲೆಯಲ್ಲಿ ವಿವೇಕರಾವ್ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಮಾಡಲಾಯಿತು. ಹೀಗಾಗಿಯೇ ಅಧ್ಯಕ್ಷರಾಗಲು ಒಪ್ಪಿಕೊಂಡಿರುವುದಾಗಿ ಅವರು ಹೇಳಿದರು.
ರಾಯಬಾಗ, ಗೋಕಾಕ, ಮೂಡಲಗಿ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಪೂರೈಸುತ್ತಿದ್ದಾರೆ. ಆದರೆ, ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ, ಅಥಣಿ ತಾಲೂಕಿನ ರೈತರು ಮಾತ್ರ ನೆರೆಯ ಮಹಾರಾಷ್ಟ್ರಕ್ಕೆ ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ. ಬೈಲಹೊಂಗಲ ರೈತರು ಕಡಿಮೆ ಪ್ರಮಾಣದಲ್ಲಿ ಹಾಲನ್ನು ಪೂರೈಸುತ್ತಿದ್ದಾರೆ. ಇದಕ್ಕೆ ಕಾರಣ ರೈತರು ಹೈನುಗಾರಿಕೆಗೆ ಅಷ್ಟಾಗಿ ಒತ್ತು ಕೊಡುತ್ತಿಲ್ಲ. ನೀರಿನ ಸಮಸ್ಯೆಯನ್ನು ಮುಂದೆ ಮಾಡುತ್ತಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಕಂಡು ಬಂದರೂ ಅಲ್ಲಿನ ರೈತರು ಹೈನುಗಾರಿಕೆಗೆ ಆದ್ಯತೆ ನೀಡುತ್ತಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿಯೂ ರೈತರು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಹೈನುಗಾರಿಕೆ ವೃದ್ಧಿಯಾದರೆ ಇಡೀ ರೈತರ ಬದುಕು ಹಸನಾಗಲು
ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಹೈನು ಕ್ರಾಂತಿಯಾಗಬೇಕಿದೆ. ನಮ್ಮ ಜಿಲ್ಲೆಯಿಂದ ಪಕ್ಕದ ಮಹಾರಾಷ್ಟ್ರಕ್ಕೆ ಹೋಗುತ್ತಿರುವ ೧೫ ಲಕ್ಷ ಲೀ. ಹಾಲನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ.
ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಪ್ರಗತಿಗಾಗಿ ಆಡಳಿತ ಮಂಡಳಿಯ ಸದಸ್ಯರು, ಹೈನಗಾರರು ಮತ್ತು ಸಿಬ್ಬಂದಿಗಳು ಒಗ್ಗಟ್ಟಾಗಿ ಶ್ರಮಿಸಿದರೇ ಖಂಡಿತವಾಗಿಯೂ ನಮ್ಮ ಒಕ್ಕೂಟಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತವೆ ಎಂದು ಅವರು ತಿಳಿಸಿದರು.
ವಿವೇಕರಾವ್ ಪಾಟೀಲ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆನ್ನವರ, ಡಾ. ಬಸವರಾಜ ಪರನ್ನವರ, ಬಾಬುರಾವ ವಾಘಮೋಡೆ, ವೀರುಪಾಕ್ಷಿ ಈಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಣಿ ಚೆನ್ನಮ್ಮ ವಿವಿ ರಿಜಿಸ್ಟರ್ ರಾಜಶ್ರೀ ಜೈನಾಪುರ ಅವರು ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.


