ಆಕಸ್ಮಿಕ ಅಗ್ನಿ ಅವಘಡ ; ಸುಟ್ಟು ಕರಕಲಾದ ಜೋಡಿ ಮನೆ
ಬೆಳಗಾವಿ : ದೇವರ ಮುಂದೆ ಇಟ್ಟಿದ್ದ ದೀಪ ಹೊತ್ತಿದ ಬೆಂಕಿಯಿಂದ ಸಿಲಿಂಡರ್ ಬ್ಲಾಸ್ಟ್ ಆಗಿದ್ದು ನಾಲ್ಕು ಕುರಿ ಸಜೀವ ದಹನವಾದ ಘಟನೆ ಬೆಳಗಾವಿಯ ಬಸವನ ಕುಡಚಿಯಲ್ಲಿ ಸಂಭವಿಸಿದೆ.
ಸವಿತಾ ದುನೊಳ್ಳಿ ಮತ್ತು ಅನಿತಾ ಕೌಲಗಿ ಸಹೋದರಿಯರಿಗೆ ಸೇರಿದ ಎರಡೂ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಅವಘಡದಲ್ಲಿ 4 ಕುರಿಗಳು ಸಜೀವ ದಹನವಾಗಿದ್ದು, ಒಟ್ಟು 4.75 ಲಕ್ಷ ರೂ. ಹಣ, 50 ಗ್ರಾಂ ಬಂಗಾರದ ಆಭರಣಗಳು, ಬೆಳ್ಳಿ ಸೇರಿದಂತೆ ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ.
ಅನಿತಾ ಕೌಲಗಿ ಮಗ ಅಭಿಷೇಕ್ ಟ್ರ್ಯಾಕ್ಟರ್ ಕೊಡಿಸಲು ದುಡಿದು 4.75 ಲಕ್ಷ ಹಣವನ್ನು ಕೂಡಿಸಿ ಮನೆಯಲ್ಲಿ ಇಟ್ಟಿದ್ದರು. ಆದರೆ ಬೆಂಕಿ ಅವಘಡದಲ್ಲಿ ಹಣ ಸಂಪೂರ್ಣ ಸುಟ್ಟು ಕರಕಲಾಗಿದ್ದು ಕುಟುಂಬ ಕಣ್ಣೀರು ಇಡುತ್ತಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸ್ಥಳಕ್ಕೆ ಶಾಸಕ ಆಸೀಫ್ ಸೇಠ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 25 ಸಾವಿರ ರೂ. ಪರಿಹಾರ ನೀಡಿದ್ದು, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.


