ವೈದ್ಯೆಯಾಗುವ ಕನಸು ಕಂಡಿದ್ದೆ : ಬಾಲ್ಯದ ಕನಸು ಬಿಚ್ಚಿಟ್ಟ ಸಚಿವೆ ಹೆಬ್ಬಾಳ್ಕರ್
ಬೆಳಗಾವಿ : ಹಳ್ಳಿಯಲ್ಲಿ ಹುಟ್ಟಿ, ಸರಕಾರಿ ಬಸ್ ಗಳಲ್ಲಿ ಓಡಾಡಿ, ಸರಕಾರಿ ಶಾಲೆಯಲ್ಲಿ ಕಲಿತು ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ನಾನು 3ನೇ ತರಗತಿಯಲ್ಲಿರುವಾಗಲೆ ವೈದ್ಯೆಯಾಗುವ ಕನಸು ಕಟ್ಟಿಕೊಂಡಿದ್ದೆ. ಆದರೆ ಈಗ ಮಂತ್ರಿಯಾಗಿ ಇಂತಹ ದೊಡ್ಡ ಯೋಜನೆ ನಿರ್ವಹಿಸುವ, ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯ ನನ್ನದಾಗಿದೆ ಎಂದು ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯಲ್ಲಿ ಮಂಗಳವಾರ ಪೋಷಣ ಮಾಸಾಚರಣೆ ಮತ್ತು ಇಲಾಖೆಯ ವಿವಿಧ ನೂತನ ಸಂಸ್ಥೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಭಾಯಿಸುವ ಭಾಗ್ಯ ನನಗೆ ಸಿಕ್ಕಿದೆ. ನಿಜವಾಗಿಯೂ ಪುಣ್ಯದ ಕೆಲಸ ಇದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಂದಾಗಿ ಇಂತಹ ಅವಕಾಶ ನನಗೆ ಸಿಕ್ಕಿದೆ. ಗೃಹಲಕ್ಷ್ಮೀ ಯೋಜನೆಯಿಂದಾಗಿ ಈ ಇಲಾಖೆಯ ಕಡೆಗೆ ವಿಶ್ವವೇ ನೋಡುವಂತಾಗಿದೆ ಎಂದು ಹೆಬ್ಬಾಳಕರ್ ಹೇಳಿದರು.
ಮಹಿಳೆಯರು ಈ ಮೊದಲು ಸಣ್ಣ ಪುಟ್ಟದ್ದಕ್ಕೂ ಮಾವನ ಮುಂದೆ, ಗಂಡನ ಮುಂದೆ ಕೈ ಚಾಚುವ ಪರಿಸ್ಥಿತಿ ಇತ್ತು. ಸಿದ್ದರಾಮಯ್ಯ ಸರಕಾರ ಬಂದ ನಂತರ ಮಹಿಳೆಯರಿಗೆ ಯಜಮಾನಿ ಎಂದು ಕರೆದರು, ಪಂಚ ಗ್ಯಾರಂಟಿ ಮೂಲಕ ಶಕ್ತಿ ತುಂಬಿದರು.
ಇಂತಹ ಪುಣ್ಯದ ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿತು ಎಂದ ಹೆಬ್ಬಾಳಕರ್, ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ನಾನು ಪೂಜಿಸುತ್ತೇನೆ. ಯಾರದ್ದೋ ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಮ್ಮ ಸೇವೆಗೆ ಬೆಲ ಕಟ್ಟಲು ಸಾಧ್ಯವಿಲ್ಲ ಎಂದು ಪ್ರಶಂಸಿಸಿದರು.
ಈ ಮೊದಲು ಎಲ್ಲ ಕೆಲಸಗಳಿಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಬಳಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಗೃಹ ಲಕ್ಷ್ಮೀ ಯೋಜನೆ ಮೂಲಕ ಜಿಲ್ಲಾಧಿಕಾರಿಗಳಿಂದ ಹಿಡಿದ ಎಲ್ಲ ಅದಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸವನ್ನು ಮಾಡಿದರು. ಈ ಮೂಲಕ ಎಂತಹ ಬದಲಾವಣೆಯಾಯಿತು ಎನ್ನುವುದನ್ನು ನೀವೆಲ್ಲ ನೋಡಿದ್ದೀರಿ ಎಂದು ಹೆಬ್ಬಾಳಕರ್ ಹೇಳಿದರು.


