Mudalagi murder – ದೇವಸ್ಥಾನಕ್ಕೆ ಕರೆತಂದು ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ
ಮೂಡಲಗಿ : ಭೀಮನ ಅಮವಾಸ್ಯೆ ಹಿನ್ನಲೆಯಲ್ಲಿ ಮನೆಯಲ್ಲಿ ಗಂಡನ ಪಾದ ಪೂಜೆ ಮಾಡಿ, ದೇವಸ್ಥಾನಕ್ಕೆ ಕರೆತಂದು ಕೊಲೆ ಮಾಡಿಸಿದ ಘಟನೆ ಮೂಡಲಗಿಯ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ.
ತಾಲೂಕಿನ ವಡೇರಹಟ್ಟಿ ಗ್ರಾಮದ ಯುವಕ ಶಂಕರ ಸಿದ್ದಪ್ಪ ಜಗಮುತ್ತಿ(೨೫) ಎಂಬಾತನ ಮದುವೆ ಕಳೆದ ಮೂರು ತಿಂಗಳ ಹಿಂದೆ ಪ್ರಿಯಾಂಕಾ ಜಗಮುತ್ತಿ ಜೊತೆ ಬನಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದಿತ್ತು. ಸೋಮವಾರ ಪತ್ನಿಯ ಜೊತೆ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಯುವಕನೋರ್ವ ಚಾಕುವಿನಿಂದ ಇರಿದು ಶಂಕರನನ್ನು ಕೊಲೆ ಮಾಡಿದ್ದ.
ಘಟನೆ ನಂತರ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದು ಬಯಲಾಗಿದೆ. ಅವಳ ಪ್ರಿಯಕರ ಶ್ರೀದರ್ ಎಂಬಾತನೇ ಕೊಲೆ ಮಾಡಿರುವ ಆರೋಪಿ ಸಧ್ಯ ಪೊಲೀಸರ ವಶದಲ್ಲಿದ್ದಾರೆ.
ಭಾನುವಾರ ರಾತ್ರಿ ತನ್ನ ಪತ್ನಿ ಪ್ರಿಯಾಂಕಾಳ ಹುಟ್ಟುಹಬ್ಬ ಆಚರಿಸಿದ ಬಳಿಕ ಸೋಮವಾರ ಭೀಮನ ಅಮಾವಾಸ್ಯೆಯಂದು ಬೆಳಗ್ಗೆ ಬೇಗನೆ ಎದ್ದು ತನ್ನ ಅಕ್ಕನ ಮಗ ಹಾಗೂ ತನ್ನ ಪತ್ನಿ ಜೊತೆ ಸೇರಿ ಬೈಕ್ ಮೇಲೆ ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು ಕೊನೆಗೆ ತಾನು ಮದುವೆಯಾದ ಬನಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿದ್ದರು.
ಬನಸಿದ್ದೇಶ್ವರ ದೇವರ ದರ್ಶನ ಪಡೆದು ಮರಳಿ ಮನೆಗೆ ಹಿಂತಿರುವಾಗ, ‘ನಾನು ಸ್ವಲ್ಪ ಮುಂದೆ ಬಂದು ನಿಂತೆ, ನನ್ನ ಪತಿ ಬೈಕ್ ಹತ್ತಲು ಹೋದ ಸಂದರ್ಭದಲ್ಲಿ ಓರ್ವ ದುಷ್ಕರ್ಮಿ ಆತನ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ, ಹಲ್ಲೆ ಮಾಡುತ್ತಿರುವುದನ್ನು ನೋಡಿದ ಕೂಡಲೇ ನಾನು ಓಡಿ ಹೋಗಿ ಅವರನ್ನು ಹಿಡಿದುಕೊಳ್ಳವಷ್ಟರಲ್ಲಿ ಕೆಳಗೆ ಉರುಳಿಬಿದ್ದರು’ ಎಂದು ಪತ್ನಿ ಪ್ರಿಯಾಂಕಾ ಸಾರ್ವಜನಿಕರ ಮುಂದೆ ನಡೆದ ಘಟನೆಯನ್ನು ವಿವರಿಸಿದ್ದಳು.
ಆದರೆ ಒಬ್ಬನೇ ವ್ಯಕ್ತಿ ಲಾಂಗ್‌ನಿಂದ ಹಲ್ಲೆ ಮಾಡಿ ಓಡಿ ಹೋಗಿದ್ದಾನೆ ಎಂದು ಪ್ರಿಯಾಂಕಾ ಹೇಳಿದರು ಸಹ ಅವಳ ಮಾತಗಳನ್ನು ಕೇಳಿದ ಗ್ರಾಮಸ್ಥರಲ್ಲಿ ಸಂಯಾಸ್ಪದ ರೀತಿಯ ಮಾತುಗಳು ಹರಿದಾಡತೋಡಗಿದಾಗ, ಸ್ಥಳಕ್ಕೆ ಧಾವಿಸಿದ ಮೂಡಲಗಿ ಪೊಲೀಸ್ ಠಾಣಾ ಸಿಬ್ಬಂದಿಗಳು ಕೂಡಲೇ ಘಟನೆ ಬಗ್ಗೆ ಮಾಹಿತಿ ಪಡೆದು ಘಟನೆ ನಡೆದ ಎರಡು ಗಂಟೆಯಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಗೋಕಾಕ ಡಿವಾಯ್‌ಎಸ್ಪಿ ಮುಲ್ಲಾ, ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್‌ಐ ಎಚ್ ವೈ ಬಾಲದಂಡಿ ಹಾಗೂ ಸಿಬ್ಬಂದಿಗಳು ಇದ್ದರು.


