RATION CARD : ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : 6 ತಿಂಗಳಿಂದ ರೇಷನ್ ಪಡೆಯದಿದ್ದರೆ ಕಾರ್ಡ್ ರದ್ದು.!

ಬೆಂಗಳೂರು : ರಾಜ್ಯದಲ್ಲಿ ಪಡಿತರ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿ ಪಾರದರ್ಶಕತೆ ತರಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಠಿಣ ಹೆಜ್ಜೆ ಇಟ್ಟಿದೆ. ಸತತ ಆರು ತಿಂಗಳುಗಳಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಸಿ ಪಡೆಯದ ಕುಟುಂಬಗಳ ಪಡಿತರ ಚೀಟಿಗಳನ್ನು (Ration card) ರದ್ದುಪಡಿಸಿ, ಇಲಾಖೆಯ ಡೇಟಾಬೇಸ್ (Database)ನಿಂದ ಸ್ವಯಂಚಾಲಿತವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ಸುತ್ತೋಲೆ ರವಾನೆಯಾಗಿದ್ದು, ನಿಯಮ ಉಲ್ಲಂಘಿಸುವ ಕಾರ್ಡ್ಗಳ ಪಟ್ಟಿ ಸಿದ್ಧವಾಗುತ್ತಿದೆ.

ಅಕ್ರಮ ಹಾಗೂ ನಕಲಿ ಕಾರ್ಡ್ಗಳ ಹಾವಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಧಾರ್ ಜೋಡಣೆ ಪರಿಶೀಲನೆಯನ್ನು ಚುರುಕುಗೊಳಿಸಲಾಗಿದೆ. ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವುದು ಅಥವಾ ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆ ಕಾರ್ಡ್ಗಳಲ್ಲಿ ಹೆಸರು ಉಳಿಸಿಕೊಂಡಿರುವುದು ಕಂಡುಬಂದರೆ ಅಂತಹ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ.

ಅಕಸ್ಮಾತ್ ಕಾರ್ಡ್ ರದ್ದಾದರೆ ಫಲಾನುಭವಿಗಳು ಮುಂದಿನ ಮೂರು ತಿಂಗಳೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ, ಅಧಿಕಾರಿಗಳಿಂದ ಮರುಪರಿಶೀಲನೆ ಪಡೆದ ನಂತರವಷ್ಟೇ ಕಾರ್ಡ್ ಮರುಚಾಲನೆಗೊಳ್ಳಲಿದೆ.

ಬಿಳಿ ಕಾರ್ಡ್ ಮಾಲೀಕರಿಗೆ ತಪ್ಪದ ಸಂಕಷ್ಟ
ಸರ್ಕಾರದ ಈ ನೂತನ ನಿಯಮವು ಆದ್ಯತೆಯಿಲ್ಲದ ಬಿಳಿ ಪಡಿತರ ಚೀಟಿದಾರರಿಗೆ ದೊಡ್ಡ ಹೊಡೆತ ನೀಡಲಿದೆ. ಈ ವರ್ಗದ ಜನರಿಗೆ ಪ್ರತಿ ಕೆಜಿಗೆ 10.90 ರೂ. ದರದಲ್ಲಿ ತಿಂಗಳಿಗೆ ಕೇವಲ 2 ಕೆಜಿ ಅಕ್ಕಿ ಮಾತ್ರ ಸಿಗುತ್ತಿರುವುದರಿಂದ, ಬಹುತೇಕರು ಅಂಗಡಿಗಳಿಗೆ ಹೋಗಿ ಪಡಿತರ ತರಲು ನಿರಾಸಕ್ತಿ ತೋರಿದ್ದಾರೆ. ಹೀಗಾಗಿ ಆರು ತಿಂಗಳಿಂದ ಅಕ್ಕಿ ಪಡೆಯದವರ ಪಟ್ಟಿಯಲ್ಲಿ ಬಿಳಿ ಕಾರ್ಡ್ ಹೊಂದಿರುವ ಕುಟುಂಬಗಳೇ ಅಧಿಕ ಸಂಖ್ಯೆಯಲ್ಲಿದ್ದು, ಇವರ ಕಾರ್ಡ್ಗಳೇ ಹೆಚ್ಚಿನ ಪ್ರಮಾಣದಲ್ಲಿ ರದ್ದಾಗುವ ಭೀತಿ ಎದುರಾಗಿದೆ.

ದಾಖಲೆ ರದ್ದಾದರೆ ಸೌಲಭ್ಯ ವಂಚಿತರಾಗುವ ಆತಂಕ
ಪಡಿತರ ಚೀಟಿಯು ಕೇವಲ ಆಹಾರ ಧಾನ್ಯ ಪಡೆಯಲು ಮಾತ್ರವಲ್ಲದೆ, ಮಕ್ಕಳ ಶಾಲಾ ಪ್ರವೇಶ, ವಿದ್ಯಾರ್ಥಿವೇತನ ಹಾಗೂ ಇನ್ನಿತರ ಸರ್ಕಾರಿ ಸವಲತ್ತುಗಳಿಗೆ ಪ್ರಮುಖ ಗುರುತಿನ ದಾಖಲೆಯಾಗಿದೆ. ಕೇವಲ ಎರಡು ಕೆಜಿ ಅಕ್ಕಿ ಸಿಗುವುದಿಲ್ಲವೆಂದು ರೇಷನ್ ಅಂಗಡಿಗೆ ತೆರಳದಿದ್ದರೆ ಕಾರ್ಡ್ ರದ್ದಾಗಿ, ಭವಿಷ್ಯದಲ್ಲಿ ಅಗತ್ಯ ಸೇವೆಗಳಿಗೆ ದಾಖಲೆಯಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಲಿದೆ.