ಹುಬ್ಬಳ್ಳಿ : ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಸಂಜೆ ಕೆಎಲ್ಇ ಮೆಡಿಕಲ್ ಕಾಲೇಜಿಗೆ ಭೇಟಿನೀಡಿ ಶುಭ ಹಾರೈಸಿದರು.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಹುಬ್ಬಳ್ಳಿ : ವೈದ್ಯಕೀಯ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಕೆಎಲ್ಇ ಸಂಸ್ಥೆ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಹುಬ್ಬಳ್ಳಿ – ಧಾರವಾಡ ಸೇರಿದಂತೆ ಗ್ರಾಮೀಣ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗಿದೆ.
ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ. ಉತ್ತರ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ₹33 ಸಾವಿರ ಕೋಟಿ ಮೀಸಲಿಟ್ಟಿದ್ದು, ರಾಜ್ಯ ಸರ್ಕಾರ ಅಗತ್ಯ ಭೂಮಿ ಒದಗಿಸಿದರೆ ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಕೋರೆ ನಾಯಕತ್ವಕ್ಕೆ ಮೆಚ್ಚುಗೆ : ಏಳು ಮಂದಿ ಶಿಕ್ಷಕರು ಆರಂಭಿಸಿದ ಕೆಎಲ್‌ಇ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ ಎಂದು ಪ್ರಲ್ಹಾದ ಜೋಶಿ ಪ್ರಶಂಸಿಸಿದರು.
ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕೆಎಲ್‌ಇ ಸಂಸ್ಥೆ ಇಂದು ದೇಶದ ಪ್ರಮುಖ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಡಾ.ಪ್ರಭಾಕರ ಕೋರೆ ಅವರ ದೂರದೃಷ್ಟಿ ಹಾಗೂ ನಾಯಕತ್ವದಿಂದ ಸಂಸ್ಥೆ ಜಾಗತಿಕ ಮನ್ನಣೆ ಗಳಿಸಿದೆ. ಇದು ಕರ್ನಾಟಕ ಮಾತ್ರವಲ್ಲ, ಇಡೀ ದೇಶ ಹೆಮ್ಮೆಪಡುವ ಸಾಧನೆ ಎಂದರು.
ಬೆಳಗಾವಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದ ಕೆಎಲ್‌ಇ ಸಂಸ್ಥೆ, ಇದೀಗ ಹುಬ್ಬಳ್ಳಿಯಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸಿದೆ. ಈ ಭಾಗದ ಜನರ ದೀರ್ಘಕಾಲದ ಅಗತ್ಯವನ್ನು ಮನಗಂಡು ಕೋರೆ ಅವರು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ ಎಂದರು.
ಸಂಸ್ಥೆಯ ಚೇರ್ಮನ್ ಅಮಿತ್ ಕೋರೆ ಅವರು ಯುವ ನಾಯಕತ್ವದಲ್ಲಿ ಕೆಎಲ್‌ಇಯ ಸೇವಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಡಾ.ಪ್ರಭಾಕರ ಕೋರೆ, ಅಮಿತ್ ಕೋರೆ ಹಾಗೂ ಆಡಳಿತ ಮಂಡಳಿಯ ಪರಿಶ್ರಮದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಅವಕಾಶ ದೊರೆತಿದೆ ಎಂದು ಹೇಳಿದರು.
ದಾನ ಪರಂಪರೆಗೆ ಶ್ಲಾಘನೆ : ವೈದ್ಯಕೀಯ ಕಾಲೇಜು ಸ್ಥಾಪನೆಗೆ ಭೂಮಿ ನೀಡಿದ ಮೂರುಸಾವಿರ ಮಠದ ಹಿಂದಿನ ಪೀಠಾಧಿಪತಿ ಹಾಗೂ ಹಾಲಿ ಜಗದ್ಗುರುಗಳ ಕೊಡುಗೆಯನ್ನು ಜೋಶಿ ಸ್ಮರಿಸಿದರು.
ಹಿಂದಿನ ಗುರುಗಳು ನೀಡಿದ ವಚನವನ್ನು ಹಾಲಿ ಸ್ವಾಮೀಜಿ ಪಾಲಿಸಿದ್ದಾರೆ. ದಾನವಾಗಿ ನೀಡಿದ ಜಾಗದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಿ, ಗುರುಗಳ ಹೆಸರನ್ನೇ ಕಾಲೇಜಿಗೆ ಇಟ್ಟಿರುವುದು ಶ್ಲಾಘನೀಯ. ಇಂತಹ ದಾನ ಪರಂಪರೆಗೆ ಸಮಾಜ ಕೃತಜ್ಞತೆ ಸಲ್ಲಿಸಬೇಕು ಎಂದರು.
ವೈದ್ಯಕೀಯ ಕಾಲೇಜು 751ಕ್ಕೆ
ದೇಶದ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಿದೆ ಎಂದು ಜೋಶಿ ಹೇಳಿದರು.
ದೇಶದಲ್ಲಿ ಹಿಂದೆ ಸುಮಾರು 300ರಷ್ಟಿದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಇದೀಗ 751ಕ್ಕೆ ಏರಿದೆ. ವೈದ್ಯಕೀಯ ಸೀಟುಗಳ ಸಂಖ್ಯೆಯೂ 51 ಸಾವಿರದಿಂದ 1.30 ಲಕ್ಷಕ್ಕೆ ಹೆಚ್ಚಿದೆ. ದೇಶಾದ್ಯಂತ ಏಮ್ಸ್‌ಗಳ ಸಂಖ್ಯೆ 22ಕ್ಕೆ ತಲುಪಿದೆ ಎಂದರು.
ಭಾರತೀಯ ವೈದ್ಯರು, ನರ್ಸ್‌ಗಳು ಹಾಗೂ ವೈದ್ಯಕೀಯ ತಂತ್ರಜ್ಞರ ಮೇಲೆ ಜಗತ್ತಿನಾದ್ಯಂತ ವಿಶ್ವಾಸವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದೇಶದ ಮಾನವ ಸಂಪನ್ಮೂಲಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ ಎಂದು ಹೇಳಿದರು.
ಬಟಾಟೆ ಚಿಪ್ಸ್‌ನಿಂದ ಸೆಮಿಕಂಡಕ್ಟರ್‌ವರೆಗೆ
ಭಾರತದ ತಂತ್ರಜ್ಞಾನ ಹಾಗೂ ಉತ್ಪಾದನಾ ಕ್ಷೇತ್ರದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಜೋಶಿ, ಹಿಂದೆ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ ಚಿಪ್ಸ್‌ಗಳಿಗಾಗಿ ಭಾರತ ವಿದೇಶಗಳನ್ನು ಅವಲಂಬಿಸಬೇಕಾಗಿತ್ತು. ಈಗ ದೇಶದಲ್ಲೇ ಇವುಗಳ ಉತ್ಪಾದನೆ ನಡೆಯುತ್ತಿದೆ ಎಂದರು.
ಒಮ್ಮೆ ಭಾರತದಲ್ಲಿ ಬಟಾಟೆ ಚಿಪ್ಸ್ ಮಾತ್ರ ತಯಾರಾಗುತ್ತವೆ ಎಂದು ವ್ಯಂಗ್ಯವಾಡಲಾಗುತ್ತಿತ್ತು. ಇದೀಗ ಸೆಮಿಕಂಡಕ್ಟರ್‌ನಿಂದ ಅತ್ಯಾಧುನಿಕ ಎಲೆಕ್ಟ್ರಾನಿಕ್ ಚಿಪ್ಸ್‌ವರೆಗೆ ಉತ್ಪಾದಿಸುವ ಸಾಮರ್ಥ್ಯ ದೇಶಕ್ಕೆ ಬಂದಿದೆ ಎಂದು ಹೇಳಿದರು.
ಭಾರತ ಜಗತ್ತಿನ ಅತ್ಯಂತ ಯುವ ರಾಷ್ಟ್ರವಾಗಿದ್ದು, ದೇಶದ ಮಾನವ ಸಂಪನ್ಮೂಲವನ್ನು ಕೌಶಲಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ. ವೈದ್ಯಕೀಯ, ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನ ಹಾಗೂ ಡೀಪ್ ಟೆಕ್ನಾಲಜಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯುವಜನರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದರು.
ಮಕ್ಕಳು ಸಾಂಪ್ರದಾಯಿಕ ಆಲೋಚನೆಗಳಿಗೆ ಸೀಮಿತರಾಗದೆ ಹೊಸ ತಂತ್ರಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರಗಳತ್ತ ಮುಖ ಮಾಡಬೇಕು. ದೇಶದ ಅಭಿವೃದ್ಧಿಯೊಂದಿಗೆ ಹೆಜ್ಜೆ ಹಾಕಲು ಯುವಜನರು ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆಎಲ್‌ಇಗೆ ಆರೋಗ್ಯ ಸಚಿವರ ಮೆಚ್ಚುಗೆ
ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ಕಾಲೇಜು ಸ್ಥಾಪನೆಗೆ ಸೀಮಿತವಾಗದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುವ ಹೊಣೆ ಹೊರಬೇಕು. ಈ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆ ಮಾದರಿಯಾಗಿದೆ ಎಂದರು.
ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದರ ಜತೆಗೆ ವೈದ್ಯರ ಕೊರತೆ ನೀಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಮಾತನಾಡಿ, ದಾನಿಗಳ ನೆರವು, ಸಮಾಜದ ಸಹಕಾರವೇ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಗೆ ಬುನಾದಿ ಮೂರುಸಾವಿರ ಮಠ ನೀಡಿದ ಭೂಮಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಮೂಲಕ ಗುರುಗಳ ಸಂಕಲ್ಪವನ್ನು ಸಾಕಾರಗೊಳಿಸಲಾಗಿದೆ ಎಂದರು.
ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಜನಪ್ರತಿನಿಧಿಗಳು ಹಾಗೂ ಕೆಎಲ್‌ಇ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.





