ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸಂಸ್ಥೆಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡ , ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಸೆ.19ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೆಎಲ್ಇ ಸಂಸ್ಥೆಗಳ ಗೌರವಾಧ್ಯಕ್ಷ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಹೇಳಿದರು.
ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು, ಸುಮಾರು ₹700 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ, ವಿದ್ಯಾರ್ಥಿಗಳ ವಸತಿ ನಿಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಆಧುನಿಕ ವೈದ್ಯಕೀಯ ಶಿಕ್ಷಣ ನೀಡುವುದರ ಜತೆಗೆ ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಇಡೀ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಸೆ.19ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ
ಉನ್ನತ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅತಿಥಿಗಳಾಗಿ ಭಾಗವಹಿಸುವರು. ಜಗದ್ಗುರು ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿದ್ಯ ವಹಿಸಲಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜ ಆಗಬೇಕೆಂದು ಚಿಂತನೆ ಮಾಡಿ ಮೂರುಸಾವಿರ ಮಠದವರು 23 ಎಕರೆ ಜಾಗ ನೀಡಿದ್ದಾರೆ. 1,200 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗಿದೆ. ಇದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಮೊದಲು ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಅಧ್ಯಯನ ಮಾಡುತ್ತಿದ್ದರು. ಈಗ ವೈದ್ಯಕೀಯ ವಿದ್ಯಾರ್ಥಿಗಳು ಎಲ್ಲ ಕಡೆ ಕುಳಿತುಕೊಂಡು ಅಧ್ಯಯನ ಮಾಡಬಹದು. ಅತ್ಯಾಧುನಿಕ ಸೌಲಭ್ಯ, ಸ್ಕೀಲ್ ಲ್ಯಾಲ್, ಎ.ಐ. ಲ್ಯಾಬ್ ಮಾಡಲಾಗಿದೆ ಎಂದರು.
ವೈದ್ಯಕೀಯ ಆಸ್ಪತ್ರೆ ನಿರ್ಮಾಣಕ್ಕೆ 700 ಕೋಟಿ ರೂ. ವೆಚ್ಚವಾಗಿದೆ. ಒಂದು ವಸತಿ ನಿಲಯ ಆರಂಭಿಸಲಾಗಿದೆ. ಇನ್ನೂ ಎರಡು ಆರಂಭವಾಗಲಿವೆ. ವಸತಿ ಗೃಹಗಳು ಆಗಲಿವೆ. ಈಗಾಗಲೇ ಆಸ್ಪತ್ರೆ ಆರಂಭವಾಗಿ ಎರಡು ವಾರ ಆಗಿದೆ. 1,000 ಓಪಿಡಿ, 200ಕ್ಕೂ ಅಧಿಕ ಹೆರಿಗೆ ಮಾಡಿಸಲಾಗಿದೆ. ಕೊಪ್ಪಳದಿಂದ ಹಾವೇರಿ ಜನರು ಆಗಮಿಸುತ್ತಿದ್ದಾರೆ. ಕೆಲ ಕಡೆಗಳಲ್ಲಿ ಕ್ಯಾಂಪ್ ಮಾಡಲಾಗಿದೆ ಎಂದರು.
ಆಸ್ಪತ್ರೆಗೆ ಬರುವ ಜನರಿಗೆ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜನರು ಇಲ್ಲಿ ಬಂದು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಬಹುದು ಎಂದರು.
ನೂತನ ವೈದ್ಯಕೀಯ ಆಸ್ಪತ್ರೆಯಲ್ಲಿ ಬಡವರಿಗೆ 3,000 ಹಾಸಿಗೆ ಉಚಿತವಾಗಿ ಇಟ್ಟಿದ್ದೇವೆ. ಜೊತೆಗೆ ಊಟೋಪಚಾರ ಉಚಿತವಾಗಿ ನೀಡಲಾಗುವುದು. ಈಗಾಗಲೇ ಬೆಳಗಾವಿಯಲ್ಲಿ 1,200 ಹಾಸಿಗೆ ಬಡವರಿಗೆ ಸಣ್ಣ ಸಣ್ಣ ಆಪರೇಷನ್, ಹೆರಿಗೆ ಉಚಿತವಾಗಿಯೇ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಂಕರಣ್ಣ ಮುನ್ನವಳ್ಳಿ, ಮಂಜುನಾಥ ಮುನವಳ್ಳಿ, ಡಾ. ವಿ.ಡಿ.ಪಾಟೀಲ್, ಡಾ. ಬಾಬಾಜಿ ಗೇವಡೆ, ಎಂ.ಜಿ.ಹಿರೇಮಠ, ಡಾ.ಎಸ್.ಸಿ.ಹಿರೇಮಠ, ಡಾ. ವಿಶ್ವನಾಥ ಪಟ್ಟಣಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




