ಬೆಳಗಾವಿ : ವಿದೇಶಿ ಮೈನಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ 750 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಆದರೆ ನಿಜವಾಗಿ ಹೂಡಿಕೆ ಮಾಡಿರುವ ಹಣದ ಮೊತ್ತ ಕೇಳಿದರೆ ನಗು ಬರುತ್ತದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗುರುವಾರ ಗೋಕಾಕ್ ನಗರದಲ್ಲಿರುವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಇಡಿ ದಾಳಿ ಮುಕ್ತಾಯದ ನಂತರ ಭೇಟಿನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ವಿದೇಶಕದಲ್ಲಿ ಪ್ರಾರಂಭಿಸಿರುವ ಕಂಪನಿ ಇನ್ನೂ ಕಾರ್ಯಾರಂಭ ಮಾಡಿಲ್ಲ. ಇದರಲ್ಲಿ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಹಾಗೂ ಮಹಾದೇವಿ ಅವರು ತಲಾ 25 ಸಾವಿರ ರೂ. ಹಣ ಹೂಡಿಕೆ ಮಾಡಿದ್ದಾರೆ. 750 ಕೋಟಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.
ಮನೆಯಲ್ಲಿ ಸಿಕ್ಕ ಹಣವೆಷ್ಟು : ಸತೀಶ್ ಜಾರಕಿಹೊಳಿ ಅವರ ಗೋಕಾಕ್ ನಿವಾಸದಲ್ಲಿ ನಡೆದ ಇಡಿ ದಾಳಿ ಸಂದರ್ಭದಲ್ಲಿ
1 ಕೋಟಿ 73 ಲಕ್ಷ ರೂ. ಸಿಕ್ಕಿದ್ದು ಇದನ್ನು ವಶಕ್ಕೆ ಪಡೆಯಲಾಗಿದೆ. ಇದು ಬಿಟ್ಟು ಹೆಚ್ಚಿನ ಹಣ ವಶಪಡಿಸಿಕೊಂಡಿಲ್ಲ. ಹೊರಗೆ ನಡೆದ ದಾಳಿಯಲ್ಲಿ ಸಿಕ್ಕ ಹಣದ ಮಾಹಿತಿ ಗೊತ್ತಿಲ್ಲ, ನಮ್ಮ ಹಣಕ್ಕೆ ಸರಿಯಾದ ಲೆಕ್ಕ ಕೊಟ್ಟರೆ ವಾಪಸ್ ಪಡೆಯಬಹುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.



