ಬೆಳಗಾವಿ : ಅನಾಚಾರಗಳ ಅನೈತಿಕ ಕೇಂದ್ರವಾಗಿ ಬದಲಾಗಿರುವ ಗ್ರಾಮೀಣ ಹಾಗೂ ತಾಲೂಕು ಮಟ್ಟದ ಪ್ರವಾಸಿ ಮಂದಿರಗಳನ್ನು ಹದ್ದುಬಸ್ತಿನಲ್ಲಿ ಇಡುವಲ್ಲಿ ಲೋಕೋಪಯೋಗಿ ಇಲಾಖೆ ವಿಫಲವಾಗಿದೆಯಾ ಎಂಬ ಮಾತುಗಳು ಜಿಲ್ಲೆಯಾದ್ಯಂತ ಕೇಳಿಬರುತ್ತಿವೆ.
ಸದಾಕಾಲವೂ ಕುಡುಕರಿಂದ ತುಂಬಿ ತುಳುಕುತ್ತಿರುವ ಪ್ರವಾಸಿ ಮಂದಿರಗಳಿಗೆ ಮಾನವಂತರು ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಂಠಪೂರ್ತಿ ಕುಡಿದು ನಂತರ ಅಲ್ಲೇ ನಿದ್ರೆಗೆ ಜಾರುವ ಪತ್ರಕರ್ತ ಸೋಗಿಣಲ್ಲಿರುವವರನ್ನು ನಿಯಂತ್ರಿಸುವವರು ಯಾರೂ ಇಲ್ಲವಾ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವ ಅನಾಚಾರದ ಕುರಿತು ಈಗಾಗಲೇ ಬೆಳಕು ಚೆಲ್ಲಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನೂ ಜಿಲ್ಲೆಯ ಅನೇಕ ಪ್ರವಾಸಿ ಮಂದಿರಗಳ ಪರಿಸ್ಥಿತಿ ಹೀಗೆ ಇದ್ದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.
ಜನಸಾಮಾನ್ಯರು, ಅಧಿಕಾರಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ತಾತ್ಕಾಲಿಕವಾಗಿ ವಸತಿ ಸೌಲಭ್ಯ ಕಲ್ಪಿಸಲು ಹಾಗೂ ಸಣ್ಣಪುಟ್ಟ ಸಭೆ ಮಾಡುವ ಉದ್ದೇಶಕ್ಕಾಗಿ ಬೆಳಕೆಯಾಗಬೇಕಿದ್ದ ಪ್ರವಾಸಿ ಮಂದಿರಗಳು ಈಗ ಕುಡುಕರ ಅಡ್ಡೆಗಳಾಗುತ್ತಿದ್ದು, ಈ ಕುರಿತು ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡರೆ ಉತ್ತಮ.


