ಗೋಕಾಕ: ಕಳೆದ ಮೂರು ದಿನಗಳಿಂದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಿರಣ್ಯಕೇಶಿ ನದಿಗೆ ನೀರು ಹರಿದು ಬರುತ್ತಿದ್ದು ಧುಪದಾಳ ಜಲಾಶಯ ಭರ್ತಿಯಾಗಿ ನೀರು ಹರಿ ಬಿಡಲಾಗಿದೆ.

ಪ್ರಸ್ತುತ ಸುಮಾರು 8 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ ಧುಪದಾಳ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿ ಬಿಟ್ಟಿರುವ ಹಿನ್ನಲೆ ಗೋಕಾಕ ಜಲಪಾತ ಮೈದುಂಬಿ ಹರಿಯುತ್ತಿದ್ದು ವಾರಂತ್ಯದ ದಿನವಾದ ರವಿವಾರ ಪ್ರವಾಸಿಗರು ತಂಡೋಪ ತಂಡವಾಗಿ ಜಲಪಾತ ವೀಕ್ಷಣೆಗೆ ಧಾವಿಸಿದ್ದರು. ಜಿಟಿ ಜಿಟಿ ಮಳೆಯ ನಡೆವೆಯೂ ಪ್ರವಾಸಿಗರು ಜಲಪಾತ ಸೋಭಗನ್ನು ಸವಿಯುತ್ತಿರುವದು ಜಲಪಾತದ ಸುತ್ತಲೂ ಕಂಡು ಬಂದಿತು.

ಹಿಡಕಲ್ ಜಲಾಶಯದಿಂದ ನೀರು ಹರಿ ಬಿಡದಿದ್ದರು ಧುಪದಾಳ ಜಲಾಶಯಕ್ಕೆ ಹರಿದುಬರುತ್ತಿರುವ ಹೆಚ್ಚುವರಿ ನೀರನ್ನು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಘಟಪ್ರಭಾ ನದಿ ಹರಿವು ಹೆಚ್ಚಳವಾಗಿದೆ.

ಹಿರಣ್ಯಕೇಶಿ ನದಿಯ ನೀರು ಧುಪದಾಳದ ಘಟಪ್ರಭಾ ನದಿಗೆ ಹರಿದು ಬರುತ್ತಿರುವ ಹಿನ್ನಲೆ ಗೋಕಾಕ ನಗರದಿಂದ ಶಿಂಗಳಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಶಿಂಗಳಾಪೂರ ಬ್ರೀಡ್ಜ್ ಕಂ ಬ್ಯಾರೇಜ ಸಂಪೂರ್ಣ ಮುಳುಗಡೆಯಾಗಿದೆ.

ವಾಹನಗಳ ಓಡಾಟಕ್ಕೆ ನಿರ್ಭಂಧಿಸಲಾಗಿದೆ. ಶಿಂಗಳಾಪೂರ ಗ್ರಾಮಕ್ಕೆ ತೆರಳಲು ನಗರದ ಕಿಲ್ಲಾದ ಹತ್ತಿರವಿರುವ ಹೊಸ ಸೇತುವೆ ಮೂಲಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.