ಆಂಟಿ ಜೊತೆ ಪರಾರಿ ; ಯುವಕನ ಮನೆ ಧ್ವಂಸ

ಬೆಳಗಾವಿ : ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವಿವಾಹಿತ ಮಹಿಳೆಯನ್ನು ಪ್ರೀತಿಸಿ ಓಡಿಸಿಕೊಂಡು ಹೋದ ಆರೋಪದ ಹಿನ್ನೆಲೆ ಯುವಕನ ಮನೆಯ ಮೇಲೆ ನೂರಾರು ಜನ ದಾಳಿ ನಡೆಸಿ ಮನೆಯಲ್ಲಿ ಇದ್ದ ಸಾಮಗ್ರಿಗಳನ್ನು ಧ್ವಂಸಗೊಳಿಸಿದ ಘಟನೆ ಭಾನುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಭರಮ್ಯಾನಟ್ಟಿ ಗ್ರಾಮದ ಯಲ್ಲಪ್ಪ ನಾಯಕ ಕಳೆದ ಎರಡು ವರ್ಷಗಳಿಂದ ಉದ್ಯಮಭಾಗದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಪರಿಚಯ ಬೆಳೆದು, ಬಳಿಕ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನಲಾಗಿದೆ.

ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗುತ್ತಿದ್ದಂತೆ, ಕೆಲ ದಿನಗಳಿಂದ ಇಬ್ಬರೂ ಸಂಪರ್ಕದಲ್ಲಿದ್ದು, ಕೊನೆಗೆ ಮಹಿಳೆಯನ್ನು ಯಲ್ಲಪ್ಪ ಓಡಿಸಿಕೊಂಡು ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ವಿಚಾರ ತಿಳಿದ ಮಹಿಳೆಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕ್ರೋಶಗೊಂಡು, ಯಲ್ಲಪ್ಪನ ಕುಟುಂಬದವರಿಗೆ ಈ ಕುರಿತು ಸಂಪೂರ್ಣ ಮಾಹಿತಿ ಇದೆ ಎಂದು ಆರೋಪಿಸಿ ಭರಮ್ಯಾನಟ್ಟಿ ಗ್ರಾಮಕ್ಕೆ ಆಗಮಿಸಿದ್ದಾರೆ. ಬಳಿಕ ಇಪ್ಪತ್ತಕ್ಕು ಹೆಚ್ಚು ಜನ ಸೇರಿಕೊಂಡು ಯಲ್ಲಪ್ಪನ ಮನೆ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ದಾಳಿಯ ವೇಳೆ ಮನೆಯಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ ಗುಂಪು, ಮನೆ ಒಳಗಿದ್ದ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು ಸೇರಿದಂತೆ ಹಲವು ಸಾಮಗ್ರಿಗಳನ್ನು ಧ್ವಂಸಗೊಳಿಸಿದೆ ಎನ್ನಲಾಗಿದೆ. ಮನೆಯ ಬಾಗಿಲು, ಕಿಟಕಿ ಹಾಗೂ ಇತರೆ ವಸ್ತುಗಳಿಗೆ ಹಾನಿಯಾಗಿದೆ.