ಕರ್ತವ್ಯ ಮರೆತ ಬೈಲಹೊಂಗಲ ಅಧಿಕಾರಿಗಳ ವಿರುದ್ಧ ದಾಖಲಾಯ್ತು ಪ್ರಕರಣ ; ಲೋಕಾಯುಕ್ತ ಗರಂ
ಬೆಳಗಾವಿ : ಜೂನ್ 8 ರಂದು ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಹಲವೆಡೆ ಸುರಿದ ಧಾರಾಕಾರ ಮಳೆಯ ಪರಿಣಾಮ ಸಾರ್ವಜನಿಕರ ಆಸ್ತಿ ಹಾನಿಯಾಗಿತ್ತು. ಕೆಲವು ಮನೆಗಳು ಬಿದ್ದ ಪರಿಣಾಮ ಬಡವರ ಬದುಕು ರಸ್ತೆಗೆ ಬಂದಿತ್ತು. ಅಧಿಕಾರಿಗಳಿಂದ ಕರ್ತವ್ಯಲೋಪ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಾಯುಕ್ತ ವರದಿ ಆಧರಿಸಿ 6 ಜನ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಬೈಲಹೊಂಗಲದ ಉಪವಿಭಾಗಾಧಿಕಾರಿ, ತಹಸೀಲ್ದಾರ್, ತಾ.ಪಂ ಇಒ, ನಗರಸಭೆ ಪೌರಾಯುಕ್ತ, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿ ಸೇರಿ ಒಟ್ಟು ಆರು ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 7(2) ಹಾಗೂ 9(3) ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದ್ದು, ಅಧಿಕಾರಿಗಳು ಜುಲೈ 27ರಂದು ಖುದ್ದಾಗಿ ಹಾಜರಾಗಿ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಉಪಲೋಕಾಯುಕ್ತ-2 ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮಳೆ ನೀರಿನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಲೋಕಾಯುಕ್ತ ಬೆಳಗಾವಿ ಘಟಕದ ಪೊಲೀಸ್ ಉಪ ಅಧೀಕ್ಷಕ ಬಿ.ಎಸ್.ಪಾಟೀಲ ಅವರು ಸಲ್ಲಿಸಿದ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಸುರಕ್ಷತೆ ಹಾಗೂ ಸ್ವಚ್ಛ ಪರಿಸರದ ಹಕ್ಕು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕಿನ ಭಾಗವಾಗಿದೆ. ಅದನ್ನು ಕಾಪಾಡುವುದು ಸರ್ಕಾರ ಮತ್ತು ಅಧಿಕಾರಿಗಳ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ನೀಡಿರುವ ವಿವಿಧ ತೀರ್ಪುಗಳನ್ನು ಆದೇಶದಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಉಲ್ಲೇಖಿಸಿದ್ದಾರೆ.
ಮುಂಗಾರು ಮಳೆ ಆರಂಭದಲ್ಲೆ ಈ ರೀತಿ ನಷ್ಟವನ್ನುಂಟು ಮಾಡಿರುವ ಮಳೆಯು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ತಾಲೂಕಾ ಆಡಳಿತ ಬೈಲಹೊಂಗಲ, ಸವದತ್ತಿ ಹಾಗೂ ಜಿಲ್ಲಾಡಳಿತ ಬೆಳಗಾವಿರವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಹೆಚ್ಚಿನ ಪ್ರಾಣ ಹಾನಿ ಹಾಗೂ ಆಸ್ತಿ ನಷ್ಟವನ್ನು ತಡೆಗಟ್ಟಬಹುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

