ಕೃಷ್ಣಾ ನದಿಗೆ 2 ಟಿಎಂಸಿ ನೀರು ; ಡಿಸಿ ಮಹತ್ವದ ಹೇಳಿಕೆ

ಬೆಳಗಾವಿ : ಮುಂಗಾರು ಮಳೆಯ ತೀವ್ರ ಅಭಾವದಿಂದ ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ವಿಶೇಷವಾಗಿ ಚಿಕ್ಕೋಡಿ, ರಾಯಭಾಗ ಹಾಗೂ ಅಥಣಿ ಭಾಗಗಳಲ್ಲಿ ನೀರಿನ ಕೊರತೆ ಜನರನ್ನು ಸಂಕಷ್ಟಕ್ಕೆ ತಳ್ಳಿದೆ.
ಈ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಚುರುಕುಗೊಂಡಿದ್ದು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಟ್ಟದಲ್ಲಿ ಮಹತ್ವದ ಚರ್ಚೆಗಳು ಆರಂಭವಾಗಿವೆ. ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ.
ಜೂನ್ 20ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ಈ ವೇಳೆ ಕೃಷ್ಣ ನದಿಗೆ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸುವ ನಿರೀಕ್ಷೆಯಿದೆ.
ಕೃಷ್ಣ ನದಿಗೆ ಎರಡು ಟಿಎಂಸಿ ನೀರು ಬಿಡುಗಡೆ ಮಾಡಿದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಭಾಗ ಹಾಗೂ ಅಥಣಿ ಭಾಗಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ತಗ್ಗುವ ಜೊತೆಗೆ ಜನರ ಆತಂಕವೂ ಕಡಿಮೆಯಾಗುವ ಸಾಧ್ಯತೆ ಇದೆ.
ಇದೇ ವೇಳೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರು ವಿನಿಮಯ ಒಪ್ಪಂದವೂ ಮತ್ತೆ ಚರ್ಚೆಗೆ ಬಂದಿದೆ. ಡಿ.ಕೆ. ಶಿವಕುಮಾರ್ ಮತ್ತು ಮಹಾರಾಷ್ಟ್ರ ಸಿಎಂ ನಡುವಿನ ಮಾತುಕತೆಯಲ್ಲಿ ಈ ವಿಷಯ ಪ್ರಮುಖ ಅಜೆಂಡಾ ಆಗಿದೆ. ಒಪ್ಪಂದ ಯಶಸ್ವಿಯಾದರೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯಗಳಿಗೆ ಲಾಭವಾಗಲಿದೆ.
ಮಹಾರಾಷ್ಟ್ರದಿಂದ ಕೃಷ್ಣ ನದಿಗೆ ನೀರು ಬಿಡುಗಡೆ ಮಾಡಿದರೆ ಬೆಳಗಾವಿಗೆ ಅನುಕೂಲವಾಗಲಿದ್ದು, ಪ್ರತಿಯಾಗಿ ತುಬಚಿ-ಬಬಲೇಶ್ವರ ನೀರಾವರಿ ಯೋಜನೆ ಮೂಲಕ ಮಹಾರಾಷ್ಟ್ರದ ಜತ್ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರ ದೊರೆಯುವ ಸಾಧ್ಯತೆ ಇದೆ.
ಇದರ ನಡುವೆ ಬೆಳಗಾವಿ ಜಿಲ್ಲೆಯ ಎರಡು ಪ್ರಮುಖ ಜಲಾಶಯಗಳು ಸಂಪೂರ್ಣ ಖಾಲಿಯಾಗಿರುವುದು ಆತಂಕ ಹೆಚ್ಚಿಸಿದೆ. ಜಲಾಶಯಗಳಲ್ಲಿ ಉಳಿದಿರುವ ನೀರನ್ನು ಸದ್ಯ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತಿದೆ.
ಒಟ್ಟಾರೆ, ಸಿಎಂ ಮತ್ತು ಡಿಕೆಶಿ ಅವರ ಮಹಾರಾಷ್ಟ್ರ ಭೇಟಿ ಇದೀಗ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಈ ಮಾತುಕತೆಯ ಫಲಿತಾಂಶದ ಮೇಲೆ ಬೆಳಗಾವಿ ಜಿಲ್ಲೆಯ ನೀರಿನ ಭವಿಷ್ಯ ಸಾಕಷ್ಟು ಮಟ್ಟಿಗೆ ಅವಲಂಬಿತವಾಗಿದೆ.
ಬೈಟ್: ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ

