Select Page

ಶಿವಾನಂದ ನೀಲಣ್ಣನವರ ಫ್ಯೂಸ್ ಕಿತ್ತ ಅಧಿಕಾರಿಗಳು ; ಕಚೇರಿ ಮೇಲೆ ದಾಳಿ, ಮಾಹಿತಿ ಸಂಗ್ರಹ..!

ಶಿವಾನಂದ ನೀಲಣ್ಣನವರ ಫ್ಯೂಸ್ ಕಿತ್ತ ಅಧಿಕಾರಿಗಳು ; ಕಚೇರಿ ಮೇಲೆ ದಾಳಿ, ಮಾಹಿತಿ ಸಂಗ್ರಹ..!



ಬೆಳಗಾವಿ : ಶಿವಂ ಅಸೋಸಿಯೇಟ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಸೇರಿದ ಕಚೇರಿಗಳ ಮೇಲೆ ಗುರುವಾರ ಬೆಳಗಾವಿ ಜಿಲ್ಲಾಡಳಿತ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದರು.

ನಗರದ ಶಿವ ಬಸವ ನಗರದಲ್ಲಿರುವ ಎರಡು ಕಚೇರಿಗಳ ಮೇಲೆ ನಡೆದ ಈ ದಾಳಿ ನಗರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವನ್ ನಾಯಕ್ ನೇತೃತ್ವದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳ ತಂಡ ಕಚೇರಿಗೆ ಭೇಟಿ ನೀಡಿ ಹಣಕಾಸು ವ್ಯವಹಾರಗಳು, ಹೂಡಿಕೆ ದಾಖಲೆಗಳು, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿತು. ಕೆಲ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಶಿವಂ ಅಸೋಸಿಯೇಟ್ ಸಂಸ್ಥೆ ಮಾಜಿ ಸೈನಿಕರು ಸೇರಿದಂತೆ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿದರ ನೀಡುವುದಾಗಿ ಭರವಸೆ ನೀಡಿ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹೂಡಿಕೆದಾರರ ಸಾವಿರಾರು ಕೋಟಿ ರೂಪಾಯಿ ಹಣ ದುರುಪಯೋಗವಾಗಿರುವ ಸಾಧ್ಯತೆಯೂ ಅಧಿಕಾರಿಗಳ ತನಿಖೆಯಲ್ಲಿ ಪರಿಶೀಲನೆಯಲ್ಲಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಶಿವಾನಂದ ನೀಲಣ್ಣನವರ್ ಅವರ ಹಲವು ಹೇಳಿಕೆಗಳು ಹಾಗೂ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು. ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, “ನಮ್ಮ ಬಳಿ 15 ಸಾವಿರ ಬಂದೂಕುಗಳಿವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ, ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ” ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಅದೇ ಭಾಷಣದಲ್ಲಿ “2028ರ ಚುನಾವಣೆಯಲ್ಲಿ 224 ಸ್ಥಾನ ಗೆದ್ದು ಸಿಎಂ ಆಗುತ್ತೇನೆ” ಎಂಬ ಹೇಳಿಕೆಯೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆಗಳ ನಂತರ ಹಲವು ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಶಿವಾನಂದ ನೀಲಣ್ಣನವರ್ ನೇತೃತ್ವದಲ್ಲಿ ಮೇ 17ರಂದು “ಸ್ವಚ್ಛ ಬೆಳಗಾವಿ” ಹೆಸರಿನಲ್ಲಿ ಭಾರಿ ಕಾರ್ಯಕ್ರಮ ಆಯೋಜನೆಗೂ ಸಿದ್ಧತೆ ನಡೆಸಲಾಗಿತ್ತು. ಸುಮಾರು 20 ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿರುವುದಾಗಿ ಹೇಳಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅನುಮತಿ, ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್‌ಗಳು ಹಾಗೂ ಸಾರ್ವಜನಿಕ ಸಭೆಗಳ ಬಗ್ಗೆ ಜಿಲ್ಲಾಡಳಿತ ಈಗಾಗಲೇ ಕಠಿಣ ನಿಲುವು ತೆಗೆದುಕೊಂಡಿತ್ತು.

ಈ ನಡುವೆ ಕಚೇರಿಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಅಧಿಕಾರಿಗಳ ಪರಿಶೀಲನೆಯ ಬಳಿಕ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದು, ಅಗತ್ಯವಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Advertisement

Leave a reply

Your email address will not be published. Required fields are marked *

error: Content is protected !!