Select Page

Advertisement

ಪುಡಾರಿ ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆವಿಧಿಸಿದ ಬೆಳಗಾವಿ ಕೋರ್ಟ್

ಪುಡಾರಿ ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆವಿಧಿಸಿದ ಬೆಳಗಾವಿ ಕೋರ್ಟ್



ಬೆಳಗಾವಿ : ಬೆಳಗಾವಿ ನಗರದ ಶಿವಬಸವ ನಗರದಲ್ಲಿ ನಡೆದಿದ್ದ ಶಹಬಾಜ್ ಪಠಾಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶನಿವಾರ ಈ ತೀರ್ಪು ಪ್ರಕಟಿಸಿದ್ದು, ನ್ಯಾಯಾಧೀಶರಾದ ಗಂಗಾಧರ ಕೆ. ಅವರು ಶಿಕ್ಷೆಯನ್ನು ಘೋಷಿಸಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸರಕಾರಿ ಅಭಿಯೋಜಕ ಆರ್.ಎ. ಗಡ್ಕರಿ, ಲಕ್ಷ್ಮಣ ದಡ್ಡಿ, ಸವೀನ ದಡ್ಡಿ, ಬಸವರಾಜ ದಡ್ಡಿ ಮತ್ತು ಬಸವಣ್ಣಿ ನಾಯಕ ಎಂಬ ನಾಲ್ವರನ್ನು ನ್ಯಾಯಾಲಯ ದೋಷಿಗಳೆಂದು ತೀರ್ಮಾನಿಸಿದೆ. ಇದೇ ವೇಳೆ ಈ ಆರೋಪಿಗಳು ಇನ್ನೂ ಇಬ್ಬರ ಮೇಲೆ ಕೊಲೆ ಯತ್ನ ನಡೆಸಿದ ಆರೋಪವೂ ಸಾಬೀತಾಗಿದೆ ಎಂದು ಅವರು ತಿಳಿಸಿದರು.

ಘಟನೆಯ ಹಿನ್ನಲೆ, ಕಳೆದ 2020ರಂದು ಶಹಬಾಜ್ ಪಠಾಣ್ ಅವರು ತಮ್ಮ ಸ್ನೇಹಿತನ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಶಿವಬಸವ ನಗರ ಪ್ರದೇಶದಲ್ಲಿ ಆರೋಪಿಗಳು ಬಿಳಿ ಬಣ್ಣದ ಟಾಟಾ ಸುಮೋ ವಾಹನದ ಮೂಲಕ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆತ ತನ್ನ ಪ್ರಾಣ ಉಳಿಸಿಕೊಳ್ಳಲು ಪರಾರಿಯಾಗಲು ಯತ್ನಿಸಿ ಸಮೀಪದಲ್ಲಿದ್ದ ನಿವೃತ್ತ ಡಿವೈಎಸ್ಪಿ ಅವರ ಮನೆಗೆ ಆಶ್ರಯಕ್ಕಾಗಿ ಹೋಗಿದ್ದಾನೆ.

ಆದರೆ ಆರೋಪಿಗಳು ಅಲ್ಲಿಗೂ ಬೆನ್ನಟ್ಟಿಕೊಂಡು ಹೋಗಿ, ಮಾರಕಾಸ್ತ್ರಗಳನ್ನು ಬಳಸಿ ಶಹಬಾಜ್ ಮೇಲೆ ಕ್ರೂರವಾಗಿ ದಾಳಿ ನಡೆಸಿ ಕೊಲೆಗೈದಿದ್ದಾರೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶಹಬಾಜ್ ಸ್ಥಳದಲ್ಲೇ ಸಾವನ್ನಪ್ಪಿದರೆಂದು ತಿಳಿದುಬಂದಿದೆ.

ಪ್ರಕರಣದ ತನಿಖೆ ಸಮಯದಲ್ಲಿ ಪೊಲೀಸರು ಸೂಕ್ಷ್ಮವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಒಟ್ಟು 30 ಮಂದಿ ಸಾಕ್ಷಿದಾರರ ಹೇಳಿಕೆಗಳು ಮತ್ತು 128ಕ್ಕೂ ಅಧಿಕ ದಾಖಲೆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಮಂಡಿಸಲಾಯಿತು. ಈ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಇದಲ್ಲದೆ, ಆರೋಪಿಗಳಿಗೆ ಒಟ್ಟು 9.60 ಲಕ್ಷ ದಂಡ ವಿಧಿಸಲಾಗಿದ್ದು, ಅದರಲ್ಲಿಂದ 8 ಲಕ್ಷವನ್ನು ಮೃತ ಶಹಬಾಜ್ ಪಠಾಣ್ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಹಾಗೂ 1.60 ಲಕ್ಷವನ್ನು ದೂರುದಾರರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಮಾಳಮಾರುತಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷಾಧಾರ ಸಂಗ್ರಹಿಸಿ ನ್ಯಾಯಾಲಯಕ್ಕೆ ‌ಸಲ್ಲಿಸಿದ್ದರಿಂದ ಕೊಲೆಗಡುಕರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!