Select Page

Advertisement

ಬೈಲಹೊಂಗಲ – ಪ್ರೀತಿಸಿ‌ ಮದುವೆಯಾದವಳನ್ನು ಬರ್ಬರವಾಗಿ ಹತ್ಯೆಗೈದ ಪತಿ…!

ಬೈಲಹೊಂಗಲ – ಪ್ರೀತಿಸಿ‌ ಮದುವೆಯಾದವಳನ್ನು ಬರ್ಬರವಾಗಿ ಹತ್ಯೆಗೈದ ಪತಿ…!



ಬೈಲಹೊಂಗಲ : ಗೃಹ ಕಲಹದ ಹಿನ್ನೆಲೆ ಪತ್ನಿಯನ್ನು ಪತಿ ಕ್ರೂರವಾಗಿ ಹತ್ಯೆ ಮಾಡಿದ ದಾರುಣ ಘಟನೆ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಮೃತ ಮಹಿಳೆಯನ್ನು ಶಿವಕ್ಕ ಬಸವರಾಜ ಜೋಡಳಿ (33) ಎಂದು ಗುರುತಿಸಲಾಗಿದೆ. ಆರೋಪಿತ ಬಸವರಾಜ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದು, ದಂಪತಿಗಳಿಗೆ ಸೌಮ್ಯ, ಪ್ರವೀಣ ಹಾಗೂ ಪ್ರಭು ಎಂಬ ಮೂವರು ಮಕ್ಕಳು ಇದ್ದರು.

ಕಳೆದ ಸುಮಾರು ಆರು ವರ್ಷಗಳಿಂದ ಆರೋಪಿ ಮದ್ಯಪಾನ ಮಾಡಿ ಬಂದು ಸಂಶಯದ ಹಿನ್ನೆಲೆಯಲ್ಲಿ ಪತ್ನಿಗೆ ಹಲ್ಲೆ ನಡೆಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನು ಎಂದು ತಿಳಿದುಬಂದಿದೆ ಎನ್ನಲಾಗಿದೆ.

ಇದರಿಂದ ಬೇಸತ್ತ ಶಿವಕ್ಕ ಅವರು ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ತಮ್ಮ ಮನೆಗೆ ಬಂದು ವಾಸವಾಗಿದ್ದರು. ಮಗಳು ಸೌಮ್ಯಳನ್ನು ಆರೋಪಿತನು ಬೆಂಗಳೂರಿನಲ್ಲಿ ತನ್ನೊಂದಿಗೆ ಇಟ್ಟುಕೊಂಡಿದ್ದನು.

ಈ ನಡುವೆ ಆರೋಪಿ ಆಗಾಗ್ಗೆ ಊರಿಗೆ ಬಂದು ಮೃತೆಯೊಂದಿಗೆ ತಂಟೆ ಮಾಡಿ, ಬೆದರಿಕೆ ಹಾಕುತ್ತಿದ್ದನು. ಈ ಕುರಿತು ಈಗಾಗಲೇ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಶನಿವಾರ ಬೆಳಿಗ್ಗೆ ಆರೋಪಿ ಮನೆಗೆ ಬಂದು ಮೃತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನನ್ನು ಜೀವಂತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಕೂದಲು ಹಿಡಿದು ಎಳೆದುಕೊಂಡು ಮನೆಯ ಮುಂದೆ ರಸ್ತೆಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿ

ನಂತರ ಅಲ್ಲೇ ಇದ್ದ ದೊಡ್ಡ ಕಲ್ಲು ತೆಗೆದುಕೊಂಡು ತಲೆ ಹಾಗೂ ಕಾಲಿನ ಮೇಲೆ ಹೊಡೆದು ಗಂಭೀರ ಗಾಯಪಡಿಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಧ್ಯೆ ಬಿಡಿಸಲು ಬಂದ ಮೃತೆಯ ತಂದೆಯ ಮೇಲೂ ಆರೋಪಿ ಕಾಲಿನಿಂದ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ದೊಡವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್ಐ ಎಚ್.ಕೆ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Leave a reply

Your email address will not be published. Required fields are marked *

error: Content is protected !!