ಶ್ರಮಿಕರ ಹೊಟ್ಟೆಗೆ ಕೊಳೆತ ಆಹಾರ ; ಇದು ಬೆಳಗಾವಿ ಮಹಾನಗರ ಪಾಲಿಕೆಯ ಅದ್ವಾನ
ಬೆಳಗಾವಿ : ನಗರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಮಾಡಲಾಗಿದ್ದು ಬೆಳಗಾವಿ ಮಹಾನಗರ ಪಾಲಿಕೆ ಯಾವ ಮಟ್ಟಿಗೆ ಶ್ರಮಿಕರನ್ನು ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ.
ನಗರದ ಚೌವಾಟಗಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 69 ಪೌರಕಾರ್ಮಿಕರಿಗೆ ನೀಡಲಾದ ಆಹಾರದಲ್ಲಿ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ಪೂರೈಕೆ ಮಾಡಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕಾರ್ಮಿಕರಿಗೆ ನೀಡಲಾದ ಮೊಟ್ಟೆಗಳನ್ನು ಕುದಿಸಿದ ಬಳಿಕ ಅವು ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ.
ಈ ಬಗ್ಗೆ ಪೌರಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಆಹಾರವನ್ನು ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಾರ್ಮಿಕರ ಮಾತಿನ ಪ್ರಕಾರ, ಪೂರೈಕೆ ಮಾಡಿರುವ ಮೊಟ್ಟೆಗಳು ಪಶುಗಳಿಗೂ ಸಹ ತಿನ್ನಲಾಗದಷ್ಟು ಕಳಪೆ ಗುಣಮಟ್ಟದವಾಗಿವೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಮಹಾನಗರ ಪಾಲಿಕೆಯ ಆಹಾರ ಪೂರೈಕೆ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ದಿನವಿಡೀ ಕಷ್ಟಪಟ್ಟು ಕೆಲಸ ಮಾಡುವ ಪೌರಕಾರ್ಮಿಕರಿಗೆ ಸರಿಯಾದ ಹಾಗೂ ಆರೋಗ್ಯಕರ ಆಹಾರ ಒದಗಿಸಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು. ಆದರೆ ನಿರ್ಲಕ್ಷ್ಯದಿಂದ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸರಬರಾಜುದಾರರು ತಮ್ಮ ಸಮರ್ಥನೆ ನೀಡಿದ್ದು, ಮೊಟ್ಟೆಗಳನ್ನು ಒಲೆಯ ಮೇಲೆ ಕುದಿಸಿದ ಪರಿಣಾಮ ಅವುಗಳ ಬಣ್ಣ ಬದಲಾಗಿದೆ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಕಾರ್ಮಿಕರು ಒಪ್ಪಲು ಸಿದ್ಧರಿಲ್ಲ. ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ಪೂರೈಕೆ ಮಾಡಿರುವುದರಿಂದಲೇ ಈ ಪರಿಸ್ಥಿತಿ ಉಂಟಾಗಿದೆ ಎಂದು ಪೌರಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಲ್ವಿಚಾರಣೆ ವ್ಯವಸ್ಥೆಯ ಮೇಲೆಯೂ ಕಾರ್ಮಿಕರು ಪ್ರಶ್ನೆ ಮಾಡಿ ಆಹಾರ ಪೂರೈಕೆ ಪ್ರಕ್ರಿಯೆಯಲ್ಲಿ ಗುಣಮಟ್ಟವನ್ನು ಪರಿಶೀಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ತಕ್ಷಣವೇ ಉತ್ತಮ ಗುಣಮಟ್ಟದ ಆಹಾರವನ್ನು ಪೂರೈಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಕಳಪೆ ಆಹಾರ ಪೂರೈಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪೌರಕಾರ್ಮಿಕರು ಒತ್ತಾಯಿಸಿದ್ದಾರೆ.


