ರಾಮದುರ್ಗದಲ್ಲಿ ನಿಂತು ಜೋಡೆತ್ತಿನ ವಿರುದ್ಧ ಗುಡುಗಿದ ಸಾಹುಕಾರ್…!
ಬೆಳಗಾವಿ : ಬಿಡಿಸಿಸಿ ಬ್ಯಾಂಕ್ ಚುನಾವಣೆ ಮುಗಿದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದರೂ ಚುನಾವಣಾ ಸೋಲು, ಗೆಲುವಿನ ಸೇಡು ಇನ್ನೂ ಮುಗಿದಂತೆ ಕಾಣುತ್ತಿಲ್ಲ. ರಾಮದುರ್ಗ ನೆಲದಲ್ಲಿ ನಿಂತು ಬಾಲಚಂದ್ರ ಜಾರಕಿಹೊಳಿ ಮತ್ತೊಮ್ಮೆ ಗುಡುಗಿದ್ದಾರೆ.
ರಾಮದುರ್ಗ ತಾಲೂಕಿನ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಹಾಲಿ ಶಾಸಕ ಅಶೋಕ್ ಪಟ್ಟಣ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಒಗ್ಗಟ್ಟಿನ ಫಲವಾಗಿ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗೆ ಸೋಲು ಉಂಟಾಗಿತ್ತು. ಮಲ್ಲಣ್ಣ ಯಾದವಾಡ ಗೆಲ್ಲಿಸುವಲ್ಲಿ ಜೋಡಿಗಳು ಯಶಸ್ವಿಯಾಗಿದ್ದವು.
“ ಮಾಜಿ ಶಾಸಕರಿಗೆ ಟಿಕೆಟ್ ಕೊಡಿಸಿದ್ದು ನಾನು ಮತ್ತು ಉಮೇಶ್ ಕತ್ತಿ. ಆಗ ನಮ್ಮವರು ಎಂದವರು ಈಗ ಹೊರಗಿನವರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಹಾದೇವಪ್ಪ ಯಾದವಾಡ ವಿರುದ್ಧ ಬಾಲಚಂದ್ರ ಜಾರಕಿಹೊಳಿ ಹರಿಹಾಯ್ದರು.
ಸೋಮವಾರ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಶಾಸಕ ಪಟ್ಟಣ ಹಾಗೂ ಮಾಜಿ ಶಾಸಕ ಮಹಾದೇವ ಯಾದವಾಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವು ಹೊರಗಿನವರು ಎಂದು ಅಪಪ್ರಚಾರ ಮಾಡುತ್ತಾರೆ. ನಾವೇನು ಪಾಕಿಸ್ತಾನದಿಂದ ಬಂದಿಲ್ಲ ಎಂದು ಹರಿಹಾಯ್ದಿದ್ದಾರೆ.
ಯಾರು ಎಷ್ಟೇ ವಿರೋಧ ಮಾಡಿದರೂ ಡಿಸಿಸಿ ಚುನಾವಣೆಯಲ್ಲಿ 16 ಸೊಸೈಟಿ ನಮ್ಮ ಬೆಂಬಲಕ್ಕೆ ನಿಂತಿವೆ. ಯಾವತ್ತೂ ನಿಮ್ಮ ಕೈ ಬಿಡುವುದಿಲ್ಲ. ಇವತ್ತಿನ ಸಮಾರಂಭದಲ್ಲಿ ಸೇರಿರುವ ಜನರನ್ನು ನೋಡಿ ಹಾಲಿ, ಮಾಜಿಗಳಿಗೆ ನಿದ್ರೆ ಬರುವುದಿಲ್ಲ ಎಂದು ಲೇವಡಿ ಮಾಡಿದರು.


