ಮಹಿಳೆ ನಾಪತ್ತೆ ; ಹುಡುಕಿದ್ದು ಕೆರೆಯಲ್ಲಿ, ಸಿಕ್ಕಿದ್ದು ಲವರ್ ಮನೆಯಲ್ಲಿ
ಹಾಸನ : ಮದುವೆಗೆ ಬಂದಿದ್ದ ಮಹಿಳೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು ಮಹಿಳೆ ಲವರ್ ಮನೆಯಲ್ಲಿ ಪತ್ತೆಯಾಗಿದ್ದಾಳೆ.
ತುಮಕೂರು ಜಿಲ್ಲೆ ಕುಣಿಗಲ್ ನಿಂದ ಚಿಕ್ಕಮಗಳೂರು ಮದುವೆಗೆ ಬಂದಿದ್ದ ಮಹಿಳೆ ಪ್ರಿಯಾಂಕ(29) ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಳು.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಲ್ಕೆರೆ ಬಳಿ ಮಹಿಳೆಯ ಒಳ ಉಡುಪು ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು. ನಿನ್ನೆಯಿಂದ ದೂರು ನೀಡಲು ಪರದಾಡಿದರೂ ಪೊಲೀಸರು ಸ್ಪಂದಿಸಿಲ್ಲ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಿಯಾಂಕ ಮೈ ಮೇಲೆ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇದ್ದವು. ಒಡವೆ ಸಮೇತ ಪ್ರಿಯಾಂಕಾ ನಾಪತ್ತೆಯಾಗಿದ್ದರು. ಫೆಬ್ರವರಿ 12ರ ರಾತ್ರಿ 8 ಗಂಟೆಗೆ ಪ್ರಿಯಾಂಕಾ ಮಿಸ್ಸಿಂಗ್ ಆಗಿದ್ದರು.
ಯಾರೋ ದುಷ್ಕರ್ಮಿಗಳು ಪ್ರಿಯಾಂಕಾರನ್ನು ಕೊಲೆ ಮಾಡಿ ಕಲ್ಕೆರೆ ಗ್ರಾಮದ ಕೆರೆಗೆ ಶವ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಕೆರೆಯಲ್ಲಿ ಮಹಿಳೆಯ ಶವಕ್ಕಾಗಿ ಹುಡುಕಾಟ ನಡೆದಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶವಕ್ಕಾಗಿ ಹುಡುಕಾಟ ನಡೆಸಿದ್ದರು.
ಸಧ್ಯ ಮಹಿಳೆ ತನ್ನ ಲವರ್ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಕುಣಿಗಲ್ ನಲ್ಲೆ ಮಹಿಳೆ ಇರುವುದು ದೃಢವಾಗಿದೆ.


